ಸಾರಾಂಶ
ಕಾರವಾರ: ಅರಬ್ಬಿ ಸಮುದ್ರ ಅಬ್ಬರಿಸುತ್ತಿದ್ದು, ಜಿಲ್ಲೆಯ ವಿವಿಧೆಡೆ ಸಮುದ್ರ ಕೊರೆತ ಉಂಟಾಗುತ್ತಿದ್ದು, ಗುರುವಾರ ತಾಲೂಕಿನ ಮಾಜಾಳಿಯ ಬಾವಳದಲ್ಲಿ ಸಮುದ್ರ ಕೊರೆತಕ್ಕೆ ರಸ್ತೆ ಸಂಪರ್ಕವೇ ಕಡಿದುಹೋಗಿದೆ.ಅರಬ್ಬಿ ಸಮುದ್ರದ ಅಲೆಗಳ ಅಬ್ಬರಕ್ಕೆ ಬಾವಳದ ಕಡಲತೀರದ ರಸ್ತೆ ಆಹಾರವಾಗಿದೆ. ಈ ರಸ್ತೆಯಲ್ಲಿ ಬಸ್ ಕೂಡ ಸಂಚರಿಸುತ್ತಿದ್ದು, ಸ್ಥಳೀಯರಿಗೆ ಕಡಲತೀರದ ಪ್ರಮುಖ ಸಂಪರ್ಕದ ಕೊಂಡಿಯಾಗಿತ್ತು. ಬಾವಳದ ಕಡಲತೀರದ ಗುಂಟ ಅಲ್ಲಲ್ಲಿ ಸಮುದ್ರ ಕೊರೆತ ಉಂಟಾಗಿದೆ. ಪ್ರತಿದಿನ ಸಮುದ್ರ ಕೊರೆತ ಉಂಟಾಗುತ್ತಿರುವುದರಿಂದ ಸಮುದ್ರತೀರದಲ್ಲಿ ವಾಸಿಸುವವರು ಕಳವಳಗೊಂಡಿದ್ದಾರೆ.ಜಯರಾಮ್ ರಾಯಪುರ ಭೇಟಿ: ಈ ನಡುವೆ ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯ್‌ಪುರ ಅವರು ತಾಲೂಕಿನ ಮಾಜಾಳಿ, ಸದಾಶಿವಗಡ ಮತ್ತು ಅಂಕೋಲಾದ ಹಾರವಾಡದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಕಡಲ ಕೊರೆತ ಸಮಸ್ಯೆಯ ಹಾನಿಗೆ ತಡೆಗಟ್ಟಲು ಸರ್ಕಾರದಿಂದ ಶಾಶ್ವತವಾದ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಅದಷ್ಟು ಬೇಗ ಕಂಡುಕೊಳ್ಳಲಿದೆ ಎಂದರು.ಸ್ಥಳೀಯ ಅಧಿಕಾರಿಗಳಿಗೆ ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು.ಕರಾವಳಿ ದಿನೇ ದಿನೇ ಕಡಲ ಕೊರೆತ ಹೆಚ್ಚಾಗುತ್ತಿರುವ ಕಾರಣ ಕಡಲ ಕೊರೆತ ಸ್ಥಳಗಳಿಗೆ ಭೇಟಿ ನೀಡಿ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡು, ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಕರ್ನಾಟಕ ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾ. ಸಿ. ಸ್ವಾಮಿ, ಕರ್ನಾಟಕ ಜಲಸಾರಿಗೆ ಮಂಡಳಿಯ ಚೀಫ್ ಎಂಜಿನಿಯರ್ ಪ್ರಮೀತ್, ಎಕ್ಸಿಕ್ಯುಟಿವ್ ಎಂಜಿನಿಯರ್ ಪ್ರಸಾದ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.ವಿದ್ಯುತ್ ತಂತಿ ಮೇಲೆ ಮರ ಬಿದ್ದು ಹಾನಿ
ಕುಮಟಾ: ಪಟ್ಟಣದ ಹೆಗಡೆ ರಸ್ತೆಯಲ್ಲಿರುವ ಕೆಪಿಟಿಸಿಎಲ್ ಗ್ರಿಡ್ ಬಳಿ ಬೃಹತ್ ಮರವೊಂದು ಗುರುವಾರ ಬೆಳಗ್ಗೆ ವಿದ್ಯುತ್ ಮುಖ್ಯ ಸಂಪರ್ಕದ ತಂತಿಗಳ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಘಟನೆಯಿಂದ ದೊಡ್ಡ ಧೂಪದ ಮರದ ಜತೆಗೆ ಇತರ ಮರಗಳು ಕೂಡಾ ಬಿದ್ದು, ಟೊಂಗೆಗಳು ಮುರಿದು ಹಲವು ಕಂಬಗಳು ಧರಾಶಾಯಿಯಾಗಿತ್ತು. ತಂತಿಗಳು ತುಂಡಾಗಿತ್ತು.ಇದರಿಂದಾಗಿ ಪಟ್ಟಣದ ಕೈಗಾರಿಕಾ ವಸಾಹತು, ಚಿತ್ರಗಿ, ಧಾರೇಶ್ವರ ಸಹಿತ ಪ್ರಮುಖ ಪ್ರದೇಶಗಳಿಗೆ ಸಂಪೂರ್ಣ ವಿದ್ಯುತ್ ವ್ಯತ್ಯಯವಾಗಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಹೆಸ್ಕಾಂ ಎಇಇ ರಾಜೇಶ ಮಡಿವಾಳ, ಸೆಕ್ಷನ್ ಆಫೀಸರ್ ವಿಜಯ ತೊಡೂರ ಹಾಗೂ ಹೆಸ್ಕಾಂ ಸಿಬ್ಬಂದಿ ಹರಸಾಹಸ ಪಟ್ಟು ಸಂಜೆ ವೇಳೆಗೆ ಮರ ತೆರವು ಮಾಡಿದರಲ್ಲದೇ ವಿದ್ಯುತ್ ಮಾರ್ಗ ಪುನಃ ಸ್ಥಾಪಿಸಿದ್ದಾರೆ. ಇದೇ ವೇಳೆ ತಾಲೂಕಿನ ಇತರೆಡೆಗಳಲ್ಲೂ ಮರಮಟ್ಟು ಬಿದ್ದು ಸಮಸ್ಯೆಯಾಗಿದ್ದು, ಬಹುತೇಕ ಎಲ್ಲೆಡೆ ಸರಿಪಡಿಸಲಾಯಿತು.