ಸಾರಾಂಶ
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ)ದ ಕಸ್ಟಡಿಯಲ್ಲಿ ಇರುವ ದೂರುದಾರ ಚಿನ್ನಯ್ಯನ ವಿಚಾರಣೆಯನ್ನು ಭಾನುವಾರವೂ ತನಿಖಾ ತಂಡ ನಡೆಸಿದೆ.
ಕೋರ್ಟ್‌ಗೆ ಹಾಜರುಪಡಿಸಿದ ತಲೆಬುರುಡೆ ಬಗ್ಗೆ ತನಿಖಾ ತಂಡ ಹಲವು ಬಾರಿ ಪ್ರಶ್ನಿಸಿದರೂ ಆತ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಶನಿವಾರ ಎಸ್‌ಐಟಿ ಬಂಧಿಸಿತ್ತು. ಶನಿವಾರ ರಾತ್ರಿ ಕೂಡ ಚಿನ್ನಯ್ಯನ ವಿಚಾರಣೆ ನಡೆಸಲಾಗಿದ್ದು, ಭಾನುವಾರವೂ ವಿಚಾರಣೆ ಮುಂದುವರಿಯಿತು.
ವಿಚಾರಣೆ ವೇಳೆ ತನಿಖಾ ತಂಡದವರು ಚಿನ್ನಯ್ಯನನ್ನು, ‘ನಿನ್ನ ಮೊಬೈಲ್ ಎಲ್ಲಿ?’ ಎಂದು ಪದೇ, ಪದೇ ವಿಚಾರಿಸಿದ್ದಾರೆ. ಈ ವೇಳೆ, ‘ನನ್ನಲ್ಲಿ ಮೊಬೈಲ್ ಇಲ್ಲ. ನನ್ನ ಮೊಬೈಲನ್ನು ನನಗೆ ಬುರುಡೆ ತಂದುಕೊಟ್ಟವರೇ ತೆಗೆದುಕೊಂಡು ಹೋಗಿದ್ದಾರೆ. ನಾನು ಕೋರ್ಟ್‌ಗೆ ಬುರುಡೆ ತೆಗೆದುಕೊಂಡು ಹೋಗುವಾಗಲೇ ಅವರು ನನ್ನ ಮೊಬೈಲನ್ನು ಪಡೆದುಕೊಂಡಿದ್ದಾರೆ. ಅಂದಿನಿಂದ ವಕೀಲರ ಜೊತೆ ಮಾತ್ರ ನನಗೆ ಮಾತನಾಡಲು ಬುರುಡೆ ತಂಡ ಅವಕಾಶ ನೀಡಿದೆ. ಹಾಗಾಗಿ, ನನ್ನ ಮೊಬೈಲ್ ಎಲ್ಲಿದೆ ಎಂಬುದು ಗೊತ್ತಿಲ್ಲ. ಬಹುಶ: ನನ್ನ ಮೊಬೈಲ್ ನನಗೆ ಬುರುಡೆ ತಂದುಕೊಟ್ಟವರ ಬಳಿಯೇ ಇರಬಹುದು’ ಎಂದು ತಿಳಿಸಿದ್ದಾನೆ. ಹೀಗಾಗಿ, ಚಿನ್ನಯ್ಯನ ಮೊಬೈಲ್‌ನ್ನು ವಶಕ್ಕೆ ಪಡೆಯಲು ಎಸ್‌ಐಟಿ ನಿರ್ಧರಿಸಿದೆ.
ಇದೇ ವೇಳೆ, ತನಗೆ ಬುರುಡೆ ತಂದುಕೊಟ್ಟವರು, ಕೋರ್ಟ್‌ಗೆ ಹಾಜರುಪಡಿಸಿದ ತಲೆಬುರುಡೆ ಎಲ್ಲಿಂದ ಬಂತು? ಎಂಬುದರ ಬಗ್ಗೆ ತನಿಖಾ ತಂಡ ಹಲವು ಬಾರಿ ಪ್ರಶ್ನಿಸಿದರೂ, ಆತನಿಂದ ಸಮರ್ಪಕ ಮಾಹಿತಿ ಸಿಕ್ಕಿಲ್ಲ ಎನ್ನಲಾಗುತ್ತಿದೆ.