ದೊಡ್ಡಕಮ್ಮನಹಳ್ಳಿ-ಬಸವನಪುರ ಮುಖ್ಯ ರಸ್ತೆ ಸಂಪೂರ್ಣ ಹಳ್ಳ-ಕೊಳ್ಳಗಳಿಂದ ಕೂಡಿದ್ದು, ಕೆರೆಯಂತಾಗಿದೆ. ಆಳೆತ್ತರದ ಗುಂಡಿಗಳಿಂದ ಪ್ರಯಾಣಿಕರಿಗೆ ನಿತ್ಯ ನರಕ ದರ್ಶನವಾಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸಲು ಸವಾರರು ಹರಸಾಹಸ ಪಡುವಂತಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಪ್ರಮುಖ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ರಸ್ತೆಗೆ ಡಾಂಬರೀಕರಣ ಮಾಡಿರುವ ಕುರುಹೇ ಕಾಣದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದೇ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡಿದರೂ, ಹಾಳಾಗಿರುವುದು ಕಣ್ಣಿಗೆ ಕಂಡರೂ ಕಾಣದಂತೆ ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಂ.ನರಸಿಂಹಮೂರ್ತಿ

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣದೊಡ್ಡಕಮ್ಮನಹಳ್ಳಿ-ಬಸವನಪುರ ಮುಖ್ಯ ರಸ್ತೆ ಸಂಪೂರ್ಣ ಹಳ್ಳ-ಕೊಳ್ಳಗಳಿಂದ ಕೂಡಿದ್ದು, ಕೆರೆಯಂತಾಗಿದೆ. ಆಳೆತ್ತರದ ಗುಂಡಿಗಳಿಂದ ಪ್ರಯಾಣಿಕರಿಗೆ ನಿತ್ಯ ನರಕ ದರ್ಶನವಾಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸಲು ಸವಾರರು ಹರಸಾಹಸ ಪಡುವಂತಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಪ್ರಮುಖ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ರಸ್ತೆಗೆ ಡಾಂಬರೀಕರಣ ಮಾಡಿರುವ ಕುರುಹೇ ಕಾಣದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದೇ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡಿದರೂ, ಹಾಳಾಗಿರುವುದು ಕಣ್ಣಿಗೆ ಕಂಡರೂ ಕಾಣದಂತೆ ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಯಮಸ್ವರೂಪಿ ಗುಂಡಿಗಳನ್ನು ದಾಟಿಕೊಂಡೇ ಶಾಲಾ ವಾಹನಗಳು, ಬೈಕ್‌ ಸವಾರರು, ಕಾರು ಚಾಲಕರು ನಿತ್ಯ ಪ್ರಯಾಣಿಸುವ ಅನಿವಾರ್ಯತೆ ಕಳೆದ 2-3 ವರ್ಷಗಳಿಂದ ನಡೆದುಕೊಂಡೇ ಬಂದಿದೆ. ವರ್ಷಗಳೇ ಕಳೆದರೂ ದುರಸ್ತಿ ಮಾಡಿಲ್ಲ. ಮಳೆ ಬಂದರೆ ರಸ್ತೆಯಲ್ಲಿ ನೀರು ತುಂಬಿಕೊಂಡು ಗುಂಡಿ ಇರುವುದೇ ಗೊತ್ತಾಗುವುದಿಲ್ಲ. ಇದರಿಂದ ಆಗಾಗ ಬೈಕ್‌ ಸವಾರರು ಆಯಾತಪ್ಪಿ ಬೀಳುತ್ತಿದ್ದಾರೆ. ನಿತ್ಯ ಗೃಹಿಣಿಯರು ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ. ಇತ್ತೀಚೆಗೆ ಜೊಮ್ಯಾಟೋ ಸವಾರರೊಬ್ಬರು ವಾಹನದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.ಈ ಕುರಿತು ಪ್ರಜ್ಞಾವಂತ ನಿವಾಸಿಗಳು ಬೇಗೂರು ವಾರ್ಡ್ ಸಮಿತಿ ಸಭೆಗಳಲ್ಲಿ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ, ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾದರೂ ಭರವಸೆ ಮಾತ್ರ ದೊರಕಿದೆ, ಕಾಮಗಾರಿಯಾಗಿಲ್ಲ ಎಂಬ ದೂರುಗಳಿವೆ.

ತೆರಿಗೆದಾರರು ಪಾವತಿಸುವ ತೆರಿಗೆಗೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ಒಂದು ತಿಂಗಳಲ್ಲಿ ರಸ್ತೆ ಅಭಿವೃದ್ಧಿಪಡಿಸದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ----ರಸ್ತೆ ಪಕ್ಕದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನಿಂತು ಗುಂಡಿಗಳು ಬಿದ್ದಿವೆ. ಕಿ.ಮೀ.ಗಟ್ಟಲೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೇಳುವವರೇ ಇಲ್ಲ. ಮಳೆ ಶುರುವಾಗಿದೆ, ಇನ್ನೆಷ್ಟು ಅನಾಹುತಗಳಾಗುತ್ತವೋ ಗೊತ್ತಿಲ್ಲ. ಸರ್ಕಾರದ ಬಳಿ ದುಡ್ಡಿಲ್ಲದಿದ್ದರೆ ಹೇಳಲಿ, ವಾಹನ ಸವಾರರೇ ಹಣ ಕೂಡಿಸಿ ರಸ್ತೆ ರಿಪೇರಿ ಮಾಡಿಕೊಳ್ಳುತ್ತೇವೆ.-ಶಂಕರ್, ವಾಹನ ಸವಾರ