ಸಾರಾಂಶ
ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಸ್ಮರಣೆ ಕಾರ್ಯಕ್ರಮ ಸೆ. 24 ರಂದು ಸಾಣೇಹಳ್ಳಿಯ ಶ್ರೀ ಮಠದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಶಿವಮಂತ್ರ ಲೇಖನ, ಶಿವಧ್ವಜಾರೋಹಣ ನಡೆಯಲಿದೆ. ಸಂಜೆ 5 ಗಂಟೆಗೆ ವೇದಿಕೆಯ ಕಾರ್ಯಕ್ರಮ ನಂತರ ಮಹಾಬೆಳಗು ನಾಟಕ ಪ್ರದರ್ಶನಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಹೊಸದುರ್ಗ
ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಸ್ಮರಣೆ ಕಾರ್ಯಕ್ರಮ ಸೆ. 24 ರಂದು ಸಾಣೇಹಳ್ಳಿಯ ಶ್ರೀ ಮಠದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಶಿವಮಂತ್ರ ಲೇಖನ, ಶಿವಧ್ವಜಾರೋಹಣ ನಡೆಯಲಿದೆ. ಸಂಜೆ 5 ಗಂಟೆಗೆ ವೇದಿಕೆಯ ಕಾರ್ಯಕ್ರಮ ನಂತರ ಮಹಾಬೆಳಗು ನಾಟಕ ಪ್ರದರ್ಶನಗೊಳ್ಳಲಿದೆ.ಈ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪಂಡಿತಾರಾಧ್ಯ ಶ್ರೀ, ಶಿವಕುಮಾರ ಮಹಾಸ್ವಾಮಿಗಳು 40 ವರ್ಷಗಳ ಕಾಲ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದ ಮಹಾಗುರುಗಳು. ಇಂತಹ ಗುರುಗಳ ಸ್ಮರಣೆ ಮಾಡುವುದು ನಮ್ಮೆಲ್ಲರ ಪುಣ್ಯ ಎಂದರು.
ಕಾರ್ಯಕ್ರಮಕ್ಕೆ ಬಂದು ಹೋಗುವ ಭಕ್ತರಿಗೆ ಅನುಕೂಲವಾಗಲು ಬೆಳಿಗ್ಗೆ ಕಾರ್ಯಕ್ರಮ ಆಯೋಜನೆ ಮಾಡುವಂತೆ ಸಭೆಯಲ್ಲಿದ್ದ ಕೆಲವರು ಶ್ರೀಗಳಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು ಈ ಬಾರಿ ಎಂದಿನಂತೆ ಸಂಜೆ ಮಾಡೋಣ. ಮುಂದಿನ ವರ್ಷದಿಂದ ನಿಮ್ಮೆಲ್ಲರ ಅಭಿಪ್ರಾಯದಂತೆ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಮಾಡೋಣ ಎಂದರು.ಸಭೆಯಲ್ಲಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಸ್. ಸಿದ್ದಪ್ಪ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ.ಸಿ ಚಂದ್ರಪ್ಪ, ಕಲಾಸಂಘದ ಕಾರ್ಯದರ್ಶಿ ಎಸ್.ಕೆ ಪರಮೇಶ್ವರಯ್ಯ, ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ, ಜಾನಕಲ್ ತಿಮ್ಮಜ್ಜ, ಬನ್ಸಿಹಳ್ಳಿ ಅಜ್ಜಪ್ಪ, ರಾಮೇಗೌಡ, ಸಿದ್ದಯ್ಯ, ಎಸ್.ಆರ್ ಚಂದ್ರಶೇಖರಯ್ಯ, ದೃವಕುಮಾರ್, ಕೃಷ್ಣಪ್ಪ, ಗಂಗಾಧರಪ್ಪ, ಮಹೇಶ್ವರಪ್ಪ, ಪ್ರಕಾಶ್ ದಕ್ಷಿಣಮೂರ್ತಿ, ರವಿಕುಮಾರ, ಸಾಣೇಹಳ್ಳಿ ಗ್ರಾಮಸ್ಥರು, ಉಭಯ ಶಾಲೆಯ ಮುಖ್ಯಸ್ಥರು, ಸುತ್ತಮುತ್ತ ಗ್ರಾಮಸ್ಥರು ಭಾಗವಹಿಸಿದ್ದರು.