ಇ-ಖಾತೆ ಅಭಿಯಾನಕ್ಕೂ ಎರಡನೇ ದಿನವೂ ಯಶಸ್ವಿ

| Published : Jul 30 2025, 12:45 AM IST

ಸಾರಾಂಶ

ರಾಮನಗರ: ನಗರಸಭೆ ಹಮ್ಮಿಕೊಂಡಿರುವ ನಿಮ್ಮ ಆಸ್ತಿ-ನಿಮ್ಮ ಹಕ್ಕು ಮನೆ ಮನೆಗೆ ಇ-ಖಾತೆ ಅಭಿಯಾನವು ನಾಗರೀಕರಲ್ಲಿ ತಮ್ಮ ಆಸ್ತಿಪಾಸ್ತಿಗಳಿಗೆ ಇ-ಖಾತೆ ಮಾಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುತ್ತಿದೆ.

ರಾಮನಗರ: ನಗರಸಭೆ ಹಮ್ಮಿಕೊಂಡಿರುವ ನಿಮ್ಮ ಆಸ್ತಿ-ನಿಮ್ಮ ಹಕ್ಕು ಮನೆ ಮನೆಗೆ ಇ-ಖಾತೆ ಅಭಿಯಾನವು ನಾಗರೀಕರಲ್ಲಿ ತಮ್ಮ ಆಸ್ತಿಪಾಸ್ತಿಗಳಿಗೆ ಇ-ಖಾತೆ ಮಾಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುತ್ತಿದೆ.

ವಾರ್ಡ್ ನಂಬರ್ 3, 4 ಮತ್ತು 5ನೇ ವಾರ್ಡುಗಳಿಗೆ ಸಂಬಂಧಿಸಿದಂತೆ ಕಾಯಿಸೊಪ್ಪಿನ ಬೀದಿಯಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ಸಮುದಾಯದ ಭವನದಲ್ಲಿ ನಡೆದ ಅಭಿಯಾನದಲ್ಲಿ 55ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾದವು. ಈ ಅಭಿಯಾನದಲ್ಲಿ 25ಕ್ಕೂ ಅಧಿಕ ಇ-ಖಾತೆಗಳನ್ನು ಸೃಜಿಸಿ ಆಸ್ತಿ ಮಾಲೀಕರಿಗೆ ವಿತರಿಸಲಾಯಿತು.

ಮೊದಲ ಕಾರ್ಯಕ್ರಮದಲ್ಲಿ ಒಂದೇ ದಿನದಲ್ಲಿ 43 ಖಾತೆಗಳನ್ನು ವಿತರಿಸಿ ಹೊಸ ದಾಖಲೆ ಬರೆಯಲಾಗಿತ್ತು. ಆದರೆ, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸರ್ವರ್ ಸಮಸ್ಯೆಯ ಕಾರಣ 25 ಇ-ಖಾತೆಗಳನ್ನು ವಿತರಿಸಲು ಮಾತ್ರ ಸಾಧ್ಯವಾಯಿತು. ಅರ್ಜಿದಾರರಿಗೆ ಒಂದೆರಡು ದಿನದಲ್ಲಿ ಇ-ಆಸ್ತಿ ದಾಖಲೆ ಸಿಗುವ ಖಾತರಿ ಅಧಿಕಾರಿಗಳಿಂದ ದೊರೆತಿದೆ.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಎರಡನೇ ದಿನದ ಮನೆಮನೆಗೆ ಖಾತಾ ಅಭಿಯಾನಕ್ಕೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಅಭಿಯಾನ ಸಾರ್ವಜನಿಕರಲ್ಲಿ ತಮ್ಮ ಆಸ್ತಿಗಳಿಗೆ ಇ-ಖಾತೆ ಮಾಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದೆ ಎಂದು ಹೇಳಿದರು.

ಹಲವು ವರ್ಷಗಳಿಂದ ಕಂದಾಯ ಪಾವತಿ ಮಾಡದೆ, ಖಾತೆ ಮಾಡಿಕೊಳ್ಳದೆ ಉದಾಸೀನ ತೋರಿದ್ದರು. ಮನೆ ಕಟ್ಟುವ ವೇಳೆ, ಆಸ್ತಿ ಮಾರಾಟ, ವಿಭಾಗ, ಪೌತಿ ಖಾತೆ, ಲೋನ್ ಪಡೆಯುವ ಸಂದರ್ಭದಲ್ಲಿ ಮಾತ್ರ ಇ-ಖಾತೆ ಮಾಡಿಸಿಕೊಳ್ಳಲು ಬರುತ್ತಿದ್ದರು. ಇದೀಗ ಆಸ್ತಿ ಮಾಲೀಕರಿಗೆ ಖಾತಾ ದಾಖಲೆಗಳ ಕುರಿತು ಜಾಗೃತಿ ಮೂಡುತ್ತಿದ್ದು, ಕಂದಾಯ ಪಾವತಿ ಮಾಡಿ ಇ-ಆಸ್ತಿ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದರು.

ಜನರು ಎ ಖಾತಾ, ಬಿ. ಖಾತಾ ಪಡೆಯಲು ಇದೊಂದು ಉತ್ತಮ ಅವಕಾಶ. ಯಾವ ಮಧ್ಯವರ್ತಿಗಳಿಲ್ಲದೆ ನೇರವಾಗಿ ಪಡೆಯಬಹುದು. ನಗರಸಭೆಯ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗ ಕಂದಾಯ ಶಾಖೆ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಹೆಚ್ಚಿನ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ನಮ್ಮ ಗುರಿ ಜನರ ಸೇವೆ ಮಾಡುವುದಾಗಿದೆ. ಸಾರ್ವಜನಿಕರು ತಮ್ಮ ದಾಖಲಾತಿ ನೀಡಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ನಗರಸಭೆ ಆಯುಕ್ತ ಡಾ. ಜಯಣ್ಣ, ಸದಸ್ಯರಾದಿ ಪಾರ್ವತಮ್ಮ, ಸೋಮಶೇಖರ್ (ಮಣಿ), ಗಿರಿಜಮ್ಮ ಗುರುವೇಗೌಡ, ಪದ್ಮ ಜಯರಾಂ, ಗೋವಿಂದರಾಜು, ಮುಖಂಡರಾದ ಶಿವಕುಮಾರಸ್ವಾಮಿ ಚಂದ್ರು, ಗೂಳಿಕುಮಾರ್, ನಗರಸಭೆ ಅಧಿಕಾರಿಗಳಾದ ಕಿರಣ್, ನಾಗರಾಜು, ಪ್ರಸನ್ನ, ರೇಖಾ, ವೇದ, ಆನಂದ್ ಹಾಜರಿದ್ದರು.

ಬಾಕ್ಸ್ ..................

ಇಂದು ಕನ್ನಿಕಾ ಮಹಲ್‌ನಲ್ಲಿ ಅಭಿಯಾನ

ಜುಲೈ 30ರಂದು ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಮಹಲ್‌ನಲ್ಲಿ 6,7,8 ಮತ್ತು 9ನೇ ವಾರ್ಡುಗಳ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಖಾತಾ ಅಭಿಯಾನ ನಡೆಯಲಿದೆ.

ಇ-ಆಸ್ತಿ ಸೃಜಿಸಲು ಆಸ್ತಿ ಮಾಲೀಕರು ತಮ್ಮ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಪಡಿತರ ಚೀಟಿ ಇತ್ಯಾದಿ ಮಾಲೀಕರ ಗುರುತನ್ನು ದೃಢೀಕರಿಸುವ ದಾಖಲೆ, ಪೌತಿ ಖಾತೆ ಆದಲ್ಲಿ ಮರಣ ಹೊಂದಿದ ಆಸ್ತಿ ಮಾಲೀಕರ ಮರಣ ಪ್ರಮಾಣ ಪತ್ರ ಮತ್ತು ವಂಶವೃP ಪ್ರಮಾಣ ಪತ್ರ, ನೀರಿನ ತೆರಿಗೆ ರಶೀದಿ ಪ್ರತಿ, ಆರ್.ಆರ್.ಸಂಖ್ಯೆ ದಾಖಲೆ, 1.4.2004 ರ ನಂತರ ಆಸ್ತಿ ನೋಂದಣಿಯಾಗಿದ್ದರೆ ಆ ದಿನಾಂಕದಿಂದ ಪಸಕ್ತ ಸಾಲಿನವರೆಗೆ ನೂಮೂನೆ 15ರ ಇ.ಸಿ., ಆಸ್ತಿಯ ಭಾವಚಿತ್ರ, ನೋಂದಾಯಿತ ಕ್ರಮ/ದಾನ/ವಿಭಾಗ/ವಿಲ್/ಆಸ್ತಿ ವಿಭಜನೆ/ಹಕ್ಕು ನಿವೃತ್ತಿ ಮುಂತಾದ ದಾಖಲೆಗಳು, ಪ್ರಸಕ್ತ ಸಾಲಿನವರೆಗೆ ಕಂದಾಯ ಪಾವತಿಸಿರುವ ರಶೀದಿ (ನಮೂನೆ 2 ಮತ್ತು ಚಲನ್), ವಿದ್ಯುತ್ ನಿರಪೇಕ್ಷಣ ಪತ್ರ, ಕಟ್ಟಡ ಪರವಾನಿಗೆ ನಕ್ಷೆ ಪ್ರತಿ, ವಿಭಜಿತ ಸ್ವತ್ತಿನ ನಕ್ಷೆ (ಆಸ್ತಿಗಳು ವಿಭಜನೆಗೊಂಡಿದ್ದಲ್ಲಿ). ಈ ದಾಖಲೆಗಳನ್ನು ಆಸ್ತಿ ಮಾಲೀಕರು ನೀಡಿದಲ್ಲಿ ಸ್ಥಳದಲ್ಲಿಯೇ ಇ-ಆಸ್ತಿ ಸೃಜಿಸಿ ಕೊಡುವುದಾಗಿ ನಗರಸಭೆ ಆಯುಕ್ತರಾದ ಜಯಣ್ಣ ತಿಳಿಸಿದ್ದಾರೆ.

29ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರದ ಲಕ್ಷ್ಮೀ ನಾರಾಯಣ ದೇವಸ್ಥಾನದ ಸಮುದಾಯದ ಭವನದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸ್ವತ್ತಿನ ಮಾಲೀಕರಿಗೆ ಇ - ಖಾತೆ ವಿತರಿಸಿದರು.

2.ರಾಮನಗರದ ಲಕ್ಷ್ಮೀ ನಾರಾಯಣ ದೇವಸ್ಥಾನದ ಸಮುದಾಯದ ಭವನದಲ್ಲಿ ನಿಮ್ಮ ಆಸ್ತಿ-ನಿಮ್ಮ ಹಕ್ಕು ಮನೆ ಮನೆಗೆ ಇ-ಖಾತೆ ಅಭಿಯಾನ ನಡೆಯಿತು.