ಸಾರಾಂಶ
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರಿಗೆ ಆಗಮಿಸಿರುವ ಎರಡನೇ ಹಂತದ ಗಜಪಡೆಯ ತೂಕ ಪರೀಕ್ಷೆ ಶುಕ್ರವಾರ ನಡೆಯಿತು.
ಮೈಸೂರು : ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರಿಗೆ ಆಗಮಿಸಿರುವ ಎರಡನೇ ಹಂತದ ಗಜಪಡೆಯ ತೂಕ ಪರೀಕ್ಷೆ ಶುಕ್ರವಾರ ನಡೆಯಿತು.ಗುರುವಾರ ಮೈಸೂರು ಅರಮನೆ ಪ್ರವೇಶಿಸಿದ ಎರಡನೇ ತಂಡದ ಆನೆಗಳಾದ ಪ್ರಶಾಂತ, ಮಹೇಂದ್ರ, ಸುಗ್ರೀವ, ದೊಡ್ಡಹರವೆ ಲಕ್ಷ್ಮಿ, ಹಿರಣ್ಯಾ ಆನೆಗಳ ತೂಕ ಮಾಡಲಾಯಿತು.
ಧನ್ವಂತರಿ ರಸ್ತೆಯ ಮಾಪಕ ಕೇಂದ್ರಕ್ಕೆ ಆಗಮಿಸಿದ ಐದು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರ ನೇತೃತ್ವದಲ್ಲಿ ಪರೀಕ್ಷಿಸಲಾಯಿತು. ಈ ವೇಳೆ ಸುಗ್ರೀವ 5,190 ಕೆ.ಜಿ ತೂಗಿದ. ಎರಡನೇ ಹಂತದಲ್ಲಿ ಆಗಮಿಸಿದ ಆನೆಗಳ ಪೈಕಿ ಸುಗ್ರೀವ ಹೆಚ್ಚು ತೂಕವಾದ ಆನೆ ಎನಿಸಿಕೊಂಡಿತು.
ಮಹೇಂದ್ರ ಆನೆಯು 4910 ಕೆಜಿ ಇದ್ದರೆ, ಪ್ರಶಾಂತ ಆನೆಯು 4,875 ಕೆಜಿ ತೂಗಿದ. ಉಳಿದಂತೆ ದೊಡ್ಡಹರವೆ ಲಕ್ಷ್ಮೀ 3,485 ಕೆಜಿ ಇದ್ದರೆ, ಹಿರಣ್ಯ ಆನೆಯು 2,930 ಕೆಜಿ ತೂಗಿತು.ತಾಲೀಮುಇದಕ್ಕೂ ಮುನ್ನ ಗಜಪಡೆಯ ಮೊದಲ ತಂಡವನ್ನು ತಾಲೀಮಿಗೆ ಕರೆದೊಯ್ಯಲಾಯಿತು. ಅರಮನೆಯಿಂದ ಹೊರಟ ಆನೆಗಳ ತಂಡವು ಬನ್ನಿಮಂಟಪದವರೆಗೆ ತಾಲೀಮು ನಡೆಸಿದವು.
ಶುಕ್ರವಾರ ಆನೆಗಳಿಗೆ ಯಾವುದೇ ಭಾರ ಹೊರಿಸಿರಲಿಲ್ಲ. ಮೊದಲ ಹಂತದ ಎಲ್ಲಾ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡವು. ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯಾಧಿಕಾರಿಗಳು ಮತ್ತು ಪೊಲೀಸರ ಕಣ್ಗಾವಲಿನಲ್ಲಿ ಆನೆಗಳು ತಾಲೀಮು ನಡೆಸಿದವು.