ಸಾರಾಂಶ
ಚಿಕ್ಕಮಗಳೂರಿನ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದ್ವಿತೀಯ ಪಿಯು ಪರೀಕ್ಷೆಯ ಪೂರ್ವಭಾವಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬರುವ ಮಾರ್ಚ್ 1 ರಿಂದ 22ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಈ ಬಾರಿ 8394 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಜಿಲ್ಲೆಯ 18 ಕೇಂದ್ರಗಳು ಪರೀಕ್ಷೆಗಳು ನಡೆಯಲಿವೆ.ಈ ಸಂಬಂಧ ಕೆಸ್ವಾನ್‌ನಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯು ವಿಧ್ಯಾರ್ಥಿಗಳಿಗೆ ಅತೀ ಮಹತ್ವದ ಹಿನ್ನಲೆ ಹೊಂದಿರುವುದರಿಂದ ಪರೀಕ್ಷೆ ಪ್ರಕ್ರಿಯೆಯನ್ನು ಅತ್ಯಂತ ಸುವ್ಯವಸ್ಥಿತವಾಗಿ ಶಾಂತಿ ಹಾಗೂ ಶಿಸ್ತು ಪಾಲನೆಯೊಂದಿಗೆ ನಡೆಸಲು ನಿಯೋಜನೆಗೊಂಡಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ನಿಗಾವಹಿಸಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಹೇಳಿದರು. ಚಿಕ್ಕಮಗಳೂರು ಹಾಗೂ ನರಸಿಂಹರಾಜಪುರ ತಾಲ್ಲೂಕು ಖಜಾನೆಗಳಲ್ಲಿ ಇರಿಸಲಾಗುವ ಪರೀಕ್ಷಾ ಗೌಪ್ಯ ಬಂಡಲ್‌ಗಳನ್ನು ಪರೀಕ್ಷಾ ದಿನದಂದು ಸ್ವೀಕರಿಸಿ ಪರೀಕ್ಷಾ ಕೇಂದ್ರ ಗಳಿಗೆ ವಿತರಿಸಲು ತ್ರಿಸದಸ್ಯ ಸಮಿತಿಯನ್ನು ರಚಿಸಿದೆ. ಅದರಂತೆ ತ್ರಿ ಸದಸ್ಯ ಸಮಿತಿ ಸದಸ್ಯರುಗಳು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಪರೀಕ್ಷಾ ಸಮಯಕ್ಕೆ ಸರಿಯಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಿ ಕೆಲಸ ನಿರ್ವಹಿಸಬೇಕು ಎಂದರು.ಜಿಲ್ಲೆಯ 18 ಕೇಂದ್ರಗಳಲ್ಲಿ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಜೊತೆಗೆ ಸಿ.ಸಿ.ಕ್ಯಾಮರಾ, ಪರೀಕ್ಷಾ ಕೇಂದ್ರ ಸುತ್ತ ಯಾವುದೇ ಜೆರಾಕ್ಸ್ ಅಂಗಡಿಗಳು ಇರದಂತೆ ನೋಡಿಕೊಳ್ಳುವುದರ ಜೊತೆಗೆ ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಹೊರಡಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ದ್ವಿತೀಯ ಪಿ.ಯು.ಸಿ. ಪರೀಕ್ಷೆ ಸುಗಮವಾಗಿ ನಡೆಯಲು ನೇಮಕವಾಗಿರುವ ಮೇಲುಸ್ತುವಾರಿ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು. ಆಯಾಯ ತಾಲ್ಲೂಕು ತಹಸೀಲ್ದಾರರುಗಳು ಮತ್ತು ಇತರೆ ಅಧಿಕಾರಿಗಳು ಯಾವುದೇ ರಜೆಯನ್ನು ಹಾಕಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಅವರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಆದೇಶದಂತೆ ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಭೆಯಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟ ನಾಯ್ಕ ಸೇರಿದಂತೆ ವಿವಿಧ ತಾಲ್ಲೂಕು ತಹಸೀಲ್ದಾರರುಗಳು ಬಿ.ಇ.ಒ. ರವಿಕುಮಾರ್, ಡಿ.ಹೆಚ್.ಒ. ಡಾ. ಅಶ್ವತ್ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಉಪನ್ಯಾಸಕರು ಸಭೆಯಲ್ಲಿ ಹಾಜರಿದ್ದರು.