ದ್ವಿತೀಯ ಪಿಯು ಪರೀಕ್ಷೆ: ಉಡುಪಿಯಲ್ಲಿ 16.203 ಅಭ್ಯರ್ಥಿಗಳು

| Published : Mar 01 2025, 01:02 AM IST

ಸಾರಾಂಶ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ 16203 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ 16,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯಾದ್ಯಂತ ಶನಿವಾರದಿಂದ ಮಾ.21ರ ವರೆಗೆ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ 16203 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಅವರು ಪಿಯು ಪರೀಕ್ಷೆಯ ಬಗ್ಗೆ ವಿವರ ನೀಡಿದರು.

ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ 16,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ 7728 ವಿದ್ಯಾರ್ಥಿಗಳು ವಿಜ್ಞಾನ, 7246 ವಿದ್ಯಾರ್ಥಿಗಳು ವಾಣಿಜ್ಯ ಮತ್ತು 1,229 ವಿದ್ಯಾರ್ಥಿಗಳು ಕಲಾ ವಿಭಾಗದ ಪರೀಕ್ಷೆಗಳನ್ನು ಬರೆಯಲಿದ್ದಾರೆ.

ಪರೀಕ್ಷೆಗಳು ವಿದ್ಯಾರ್ಥಿ ಸ್ನೇಹಿಯಾಗಿ, ನ್ಯಾಯಯುತ ಮತ್ತು ಸುಸೂತ್ರವಾಗಿ ನಡೆಯುವುದಕ್ಕೆ ಎಲ್ಲಾ ಮುಂಜಾಗರೂಕತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿ ಅವುಗಳನ್ನು ಜಿಲ್ಲಾ ಕೇಂದ್ರದಲ್ಲಿ ವೀಕ್ಷಿಸಲಾಗುತ್ತದೆ.

ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟದ ವಿಚಕ್ಷಣಾ ದಳಗಳನ್ನು ನಿಯೋಜಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕ, ಇಬ್ಬರನ್ನು ಸಹ ಅಧೀಕ್ಷಕರನ್ನಾಗಿ, ಇಬ್ಬರನ್ನು ವಿಶೇಷ ಜಾಗೃತ ದಳದ ಸದಸ್ಯರನ್ನು ನಿಯೋಜಿಸಲಾಗಿದೆ ಎಂದರು.

ಜಿಲ್ಲಾ ಖಜಾನೆಯಲ್ಲಿ ಪ್ರಶ್ನಾಪತ್ರಿಕೆಗಳನ್ನು ಸಂಗ್ರಹಿಡಲಾಗಿದ್ದು, ಅವುಗಳನ್ನು ಆಯಾ ತಾಲೂಕಿನ ತಹಸೀಲ್ದಾರ್ ನೇತೃತ್ವದ ತ್ರಿ ಸದಸ್ಯರ ಸಮಿತಿಯು, ಜಿಪಿಎಸ್‌ ಅಳವಡಿಸಿದ ಪರೀಕ್ಷಾ ಕೇಂದ್ರಕ್ಕೆ ಪ್ರತಿದಿನ ಒಯ್ಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಹೇಳಿದರು.

ಜಿಲ್ಲೆ ನಂ.1 ಮಾಡುವ ಪ್ರಯತ್ನ:

ಉಡುಪಿ ಜಿಲ್ಲೆ ಕಳೆದ ವರ್ಷ ಶೇ 94.40 ಫಲತಾಂಶದೊಂದಿಗೆ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿತ್ತು, ಈ ಬಾರಿ 1ನೇ ಸ್ಥಾನಕ್ಕೇರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಡಿಡಿಪಿಯು ಮಾರುತಿ ಹೇಳಿದ್ದಾರೆ.

ಪ್ರತಿ ಪಿ.ಯು .ಕಾಲೇಜುಗಳಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸಲಾಗಿದೆ, ಅತ್ಯುತ್ತಮ ಅಂಕ ಮತ್ತು ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳ ಜೋಡಿ ಮಾಡಿ ಸಹ ಅದ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಗೆ ಬೆಳಿಗ್ಗೆ 5.30ಕ್ಕೆ ಕರೆ ಮಾಡಿ ಎಬ್ಬಿಸಿ ಅದ್ಯಯನಕ್ಕೆ ಸಹಾಯ ಮಾಡಲಾಗಿದೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಸಂಪನ್ಮೂಲ ಕೇಂದ್ರದ ಮೂಲಕ ಆನ್‌ಲೈನ್ ಕೋಚಿಂಗ್‌, ಗಣಿತ ಮತ್ತು ವಿಜ್ಞಾನ ಪಾಠಗಳ ರೆಕಾರ್ಡಿಂಗ್‌ ಗಳನ್ನು ಒದಗಿಸಲಾಗಿದೆ. ಪ್ರತಿ ಕಾಲೇಜಿಗೆ ಜಿಲ್ಲಾಧಿಕಾರಿಯೂ ಸೇರಿದಂತೆ ನೋಡಲ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದವರು ಹೇಳಿದರು.

.........

ಹಿಜಾಬ್‌ ಧರಿಸಿ ಪರೀಕ್ಷೆ ಬರೆಯುವಂತಿಲ್ಲ

ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ, ಪರೀಕ್ಷಾ ಕೇಂದ್ರದವರೆಗೆ ಹಿಜಾಬ್ ಧರಿಸಿ ತೆರಳಬಹುದು, ಆದರೇ ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಹಿಜಾಬ್‌ ತೆಗೆದಿಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.