ದ್ವಿತೀಯ ಪಿಯು ಪರೀಕ್ಷೆ: ಕೊಡಗಿನಲ್ಲಿ 19 ಪರೀಕ್ಷಾ ಕೇಂದ್ರ

| Published : Mar 02 2025, 01:17 AM IST

ಸಾರಾಂಶ

ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಆರಂಭವಾಗಿದೆ. ಕೊಡಗಿನಲ್ಲಿ 19 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಆರಂಭವಾಗಿದ್ದು, ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವನ್ನಾಗಿ ಮಾರ್ಪಡಿಸಿದ್ದರಿಂದ 4 ಪದವಿಪೂರ್ವ ಕಾಲೇಜಿನ 282 ವಿದ್ಯಾರ್ಥಿಗಳಿಗೆ ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಕೊಡಗಿನಲ್ಲಿ 19 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಚೆನ್ನಮ್ಮ ಪಿಯು ಕಾಲೇಜು ಮಾದಾಪುರ, ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಗರಗಂದೂರು, ಸುಂಟಿಕೊಪ್ಪ ಸಂತ ಮೇರಿ ಸಂಯುಕ್ತ ಪಿಯು ಕಾಲೇಜು, ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ 118 ಬಾಲಕರು ಹಾಗೂ 164 ಬಾಲಕಿಯರು ಒಟ್ಟು 282 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು.

ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರಾದ ಶ್ರೀಲತಾ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಅಹಿತಕರ ಚಟುವಟಿಕೆಗಳಲ್ಲಿ ತೊಡಗದೆ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ಶಿಸ್ತು ಬದ್ಧತೆಯಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಹೇಳಿದರು. ಪರೀಕ್ಷೆ ಸಂಬಂಧಿ ಇರುವ ಮಾರ್ಗದರ್ಶಿ ಸೂಚಕಗಳ ಬಗ್ಗೆ ಮಾಹಿತಿ ನೀಡಿದರು.

ಸುಳ್ಯ ಕಾಲೇಜಿನ ಉಪನ್ಯಾಸಕರಾದ ಬಾಲಕೃಷ್ಣ ಅವರು ಸಹಮುಖ್ಯ ಪರೀಕ್ಷಾ ಅಧೀಕ್ಷಕರಾಗಿದ್ದು ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು.

ಉಪನ್ಯಾಸಕಿ ಸುನೀತಾ ಗಿರೀಶ್ ಅವರು ವಿದ್ಯಾರ್ಥಿಗಳಿಗೆ ಕಾಲ ಕಾಲಕ್ಕೆ ಕೊಡಮಾಡುವ ಎಚ್ಚರಿಕೆ ಸಂದೇಶ ನಿಗದಿತ ಸಮಯಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿದರು.

ಉತ್ತರ ಪತ್ರಿಕೆಗಳ ಪಾಲಕರಾದ ಕವಿತಾ ಕೆ.ಸಿ. ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಸಿಲುಕದೆ ಸಾವಧಾನ ಚಿತ್ತದಿಂದ ಕಲಿತ ವಿಷಯಗಳನ್ನು ಮನನ ಮಾಡಿಕೊಂಡು ಪರೀಕ್ಷೆ ಎಂಬ ಯುದ್ಧವನ್ನು ಒಂದು ಕ್ರೀಡೆಯಂತೆ ತಿಳಿದು ಗೆಲುವಿನ ಹಾದಿಯತ್ತ ಸಾಗಲು ಶ್ರಮಿಸಬೇಕು ಎಂದರು.

ಉಪನ್ಯಾಸಕರಾದ ಈಶಾ, ಸರಳ, ಕವಿತಾಭಕ್ತಾ, ಪದ್ಮಾವತಿ, ಕನಕ, ಹಾಗೂ ಇತರೆ ಕಾಲೇಜುಗಳಿಂದ ಆಗಮಿಸಿದ ಉಪನ್ಯಾಸಕರು, ಕೊಠಡಿ ಮೇಲ್ವಿಚಾರಕರು ಇದ್ದರು.

ಶನಿವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ 200ಮೀಟರ್ ವರೆಗೆ ಪ್ರವೇಶಕ್ಕೆ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪೊಲೀಸ್ ಪಹರೆ ಹಾಗೂ ಆರೋಗ್ಯ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು.