ದ್ವಿತೀಯ ಪಿಯುಸಿ, ಜಿಲ್ಲೆಗೆ ಶೇ.78ರಷ್ಟು ಫಲಿತಾಂಶ

| Published : Apr 11 2024, 12:57 AM IST

ಸಾರಾಂಶ

ಹಾವೇರಿ ತಾಲೂಕಿನ ಕನವಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಸಾನಿಯಾ ಕರ್ಜಗಿ ೫೯೨ ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಜಿಲ್ಲೆ ಕಳೆದ ವರ್ಷ 24ನೇ ಸ್ಥಾನ ಪಡೆದಿತ್ತು.

ಕನ್ನಡಪ್ರಭ ವಾರ್ತೆ ಹಾವೇರಿ

ದ್ವಿತೀಯ ಪಿಯುಸಿ ಪರೀಕ್ಷೆಯ ೨೦೨೩-೨೪ನೇ ಸಾಲಿನ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಜಿಲ್ಲೆಗೆ ಶೇ. 78.೩6ರಷ್ಟು ಫಲಿತಾಂಶ ಬಂದಿದೆ. ರಾಜ್ಯ ಮಟ್ಟದಲ್ಲಿ ೨೫ನೇ ಸ್ಥಾನಕ್ಕೆ ಜಿಲ್ಲೆ ತೃಪ್ತಿಪಡುವಂತಾಗಿದೆ. ಹಾವೇರಿ ತಾಲೂಕಿನ ಕನವಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಸಾನಿಯಾ ಕರ್ಜಗಿ ೫೯೨ ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಜಿಲ್ಲೆ ಕಳೆದ ವರ್ಷ 24ನೇ ಸ್ಥಾನ ಪಡೆದಿತ್ತು.

ವಾಣಿಜ್ಯ ವಿಭಾಗ

ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣ ಫಾಲಿಫೈಬರ್ಸ್‌ ಸಂಯುಕ್ತ ಪಿಯು ಕಾಲೇಜಿನ ತಾನ್ವಿ ಗುಪ್ತಾ 588 ಅಂಕ, ಹಾವೇರಿಯ ಭಗತ್ ಪಿಯು ಕಾಲೇಜಿನ ಮೇಹರನಿಗರ್‌ ನದಾಫ್‌ 581, ಕೆಎಲ್‌ಇ ಜಿಎಚ್‌ ಕಾಲೇಜಿನ ತೇಜಸ್ವಿನಿ ಕುಲಕರ್ಣಿ 580 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗ

ಹಾವೇರಿ ತಾಲೂಕಿನ ಕನವಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಸಾನಿಯಾ ಕರ್ಜಗಿ ೫೯೨ ಅಂಕ ಪಡೆದು ಪ್ರಥಮ ಸ್ಥಾನ, ಹಾವೇರಿ ತಾಲೂಕು ಕಬ್ಬೂರು ಸರ್ಕಾರಿ ಪಿಯು ಕಾಲೇಜಿನ ನಿವೇದಿತಾ ಬಡಿಗೇರ 683 ಅಂಕ ಪಡೆದು ದ್ವಿತೀಯ ಹಾಗೂ ಕೆ.ಎಚ್‌. ಪಾಟೀಲ ಪಿಯು ಕಾಲೇಜಿನ ನಾಗಮ್ಮ ಬಿದರಕೊಪ್ಪ ಹಾಗೂ ತಡಸ ಸರ್ಕಾರಿ ಪಿಯು ಕಾಲೇಜಿನ ಭಾಗ್ಯಶ್ರೀ ಗಾಣಿಗೇರ ತಲಾ 582 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗ

ರಾಣಿಬೆನ್ನೂರು ತಾಲೂಕಿನ ದೇವಿಕಾ ಸಂಯುಕ್ತ ಪಿಯು ಕಾಲೇಜಿನ ಸಹನಾ ಬಡಿಗೇರ 588 ಅಂಕ, ಇದೇ ಕಾಲೇಜಿನ ಇಶಾ ವರಾಹಮೂರ್ತಿ 586 ಅಂಕ ಹಾಗೂ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ನಂದೀಶ ದಳವಾಯಿ ಹಾಗೂ ರಾಣಿಬೆನ್ನೂರಿನ ಆರ್‌ಟಿಇಎಸ್‌ ಕಾಲೇಜಿನ ಪ್ರದೀಪಕುಮಾರ ಛತ್ರದ ತಲಾ 585 ಅಂಕ ಪಡೆದಿದ್ದಾರೆ.

6340 ಬಾಲಕರು ಮತ್ತು 8170 ಬಾಲಕಿಯರು ಸೇರಿದಂತೆ ಒಟ್ಟು 14510 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 10898 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.78.38ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಎಂದಿನಂತೆ ಈಸಲವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ.81ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.67ರಷ್ಟು ಬಾಲಕರು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ.70.7ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಆಂಗ್ಲ ಮಾಧ್ಯಮದಲ್ಲಿ ಶೇ.83.24ರಷ್ಟು ಫಲಿತಾಂಶ ಬಂದಿದೆ.

ಗ್ರಾಮೀಣ ಭಾಗದ ಶೇ.77.55ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು, ನಗರ ಪ್ರದೇಶದ ಶೇ.78.79ರಷ್ಟು ಮಕ್ಕಳು ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದ 5819 ವಿದ್ಯಾರ್ಥಿಗಳ ಪೈಕಿ 4183 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 71.89ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 3571 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2910 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.81.49ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 3792 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3237 ವಿದ್ಯಾರ್ಥಿಗಳು ಪಾಸಾಗಿ ಶೇ.85.36ರಷ್ಟು ಫಲಿತಾಂಶ ಬಂದಿದೆ.