ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶನಿವಾರದಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮೊದಲ ದಿನ ಐಚ್ಛಿಕ ಭಾಷಾ ವಿಷಯಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಿತು. ಇದಕ್ಕಾಗಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು.ಮಾ.೨೦ರವರೆಗೂ ಪರೀಕ್ಷೆ ನಡೆಯಲಿದ್ದು ಎಲ್ಲ ಪರೀಕ್ಷೆಗಳಿಗೂ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧ರವರೆಗೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಡೆಯಲಿದೆ. ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಮೊದಲ ಹಂತದ ಪರೀಕ್ಷೆಗೆ ಒಟ್ಟು ೧೭ ಕೇಂದ್ರ ತೆರೆಯಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ ೪, ಗುಂಡ್ಲುಪೇಟೆಯಲ್ಲಿ ೩, ಯಳಂದೂರಿನಲ್ಲಿ ೨, ಕೊಳ್ಳೇಗಾಲದಲ್ಲಿ ೫ ಹಾಗೂ ಹನೂರು ತಾಲೂಕಿನಲ್ಲಿ ೩ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು,ಮೊದಲ ಬಾರಿಗೆ ಒಟ್ಟು ೬,೭೩೬ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸುತ್ತಿದ್ದಾರೆ. ಈ ಪೈಕಿ ೨೮೮೭ ಬಾಲಕರು ಹಾಗೂ ೩೮೪೯ ಬಾಲಕಿಯರಿದ್ದಾರೆ. ೨೫೯ ಮಂದಿ ಖಾಸಗಿಯಾಗಿ, ೩೦೫ ಜನ ಪುನಾರಾವರ್ತಿತ ವಿದ್ಯಾರ್ಥಿಗಳು ಹಾಗೂ ಎರಡನೇ ಪರೀಕ್ಷೆ ತೆಗೆದುಕೊಂಡಿರುವ ನಾಲ್ವರು ಸೇರಿ ಒಟ್ಟು ೭೩೬೪ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಕ್ಕೆ ಸಮಸ್ಯೆ ಕೊರತೆಯಾಗದಂತೆ ಎಲ್ಲ ಕೇಂದ್ರಗಳಲ್ಲೂ ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು, ಪರೀಕ್ಷಾ ಅಕ್ರಮ ತಡೆಯಲು ಪ್ರತಿ ಕೇಂದ್ರಕ್ಕೂ ಎಐ ಕ್ಯಾಮೆರಾ ಅಳವಡಿಸಲಾಗಿದ್ದು, ಸೂಕ್ತ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಕೇಂದ್ರದ ೨೦೦ ಮೀಟರ್ ಸುತ್ತಳತೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು, ಜಾಗೃತ ದಳ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಪಿಯು ಡಿಡಿ ಮಂಜುನಾಥ ಪ್ರಸನ್ನ ಹಾಗೂ ಸಿಬ್ಬಂದಿ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೊಠಡಿಗೂ ಹೋಗುವ ಮುನ್ನ ವಿದ್ಯಾರ್ಥಿಗಳು ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿದ್ದದು ಕಂಡು ಬಂತು.