ಕಳೆದ ಸಾಲಿನಲ್ಲಿ ಶೇ.72.3ರಷ್ಟು ಫಲಿತಾಂಶ ಪಡೆದು ಕನಿಷ್ಠ 17ನೇ ಸ್ಥಾನಕ್ಕಾದರೂ ತೃಪ್ತಿಪಟ್ಟುಕೊಂಡಿತ್ತು. 2024ರಲ್ಲಿ ಶೇ.80.7ರಷ್ಟು ಫಲಿತಾಂಶ ಪಡೆದು 23ನೇ ಸ್ಥಾನ ಹಾಗೂ 2023ರಲ್ಲಿ ಶೇ.73.5ರಷ್ಟು ಫಲಿತಾಂಶ ಪಡೆದು 27ನೇ ಸ್ಥಾನದಲ್ಲಿತ್ತು ಧಾರವಾಡ.

ಬಸವರಾಜ ಹಿರೇಮಠ

ಧಾರವಾಡ:

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ವಿದ್ಯಾಕಾಶಿ ಖ್ಯಾತಿಯ ಧಾರವಾಡ ಜಿಲ್ಲೆಯು ಶೇ.83.13ರಷ್ಟು ಫಲಿತಾಂಶ ಪಡೆಯುವ ಮೂಲಕ 23ನೇ ಸ್ಥಾನಕ್ಕೆ ಕುಸಿದಿದೆ.

ಕಳೆದ ಸಾಲಿನಲ್ಲಿ ಶೇ.72.3ರಷ್ಟು ಫಲಿತಾಂಶ ಪಡೆದು ಕನಿಷ್ಠ 17ನೇ ಸ್ಥಾನಕ್ಕಾದರೂ ತೃಪ್ತಿಪಟ್ಟುಕೊಂಡಿತ್ತು. 2024ರಲ್ಲಿ ಶೇ.80.7ರಷ್ಟು ಫಲಿತಾಂಶ ಪಡೆದು 23ನೇ ಸ್ಥಾನ ಹಾಗೂ 2023ರಲ್ಲಿ ಶೇ.73.5ರಷ್ಟು ಫಲಿತಾಂಶ ಪಡೆದು 27ನೇ ಸ್ಥಾನದಲ್ಲಿತ್ತು ಧಾರವಾಡ. ಆದರೆ, ಈ ಬಾರಿ ಹತ್ತು ಹಲವು ಪ್ರಯತ್ನ ನಡೆಸಲಾಗಿದೆ ಎಂದು ಪದವಿ ಪೂರ್ವ ಇಲಾಖೆ ಉಪ ನಿರ್ದೇಶಕಿ ತೇಜಸ್ವಿನಿ ನಾರಾಯಣಕರ ಹೇಳಿಕೊಂಡಿದ್ದರು. ಜೊತೆಗೆ 10ನೇ ಸ್ಥಾನದಲ್ಲಿ ಬರುವ ನಿರೀಕ್ಷೆ ಸಹ ಹೊಂದಲಾಗಿತ್ತು. ಆದರೆ, 23ನೇ ಸ್ಥಾನಕ್ಕೆ ಕುಸಿಯುವ ಮೂಲಕ ಇಲ್ಲಿಯ ಪದವಿ ಪೂರ್ವ ಶಿಕ್ಷಣದ ಗುಣಮಟ್ಟವನ್ನೇ ಪ್ರಶ್ನಿಸುವಂತಾಗಿದೆ.

ಶೇ.83ರಷ್ಟು ವಿದ್ಯಾರ್ಥಿಗಳು ಪಾಸ್‌:

ಈ ಬಾರಿ ಪರೀಕ್ಷೆ ಬರೆದ 24,348 ಹೊಸ ವಿದ್ಯಾರ್ಥಿಗಳ ಪೈಕಿ ಶೇ.83.13ರಷ್ಟು ಅಂದರೆ 20,288 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ರಾಜ್ಯಮಟ್ಟದಲ್ಲಿ ಸ್ಥಾನ ಕುಸಿದಿದ್ದರೂ ಸಮಾಧಾನದ ಸಂಗತಿ ಏನೆಂದರೆ, ಧಾರವಾಡದ ಜೆಎಸ್‌ಎಸ್‌ಮಂಜುನಾಥೇಶ್ವರ ಕಾಲೇಜಿನ ಶ್ರಾವಣಿ ಪಾಟೀಲ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದಿದ್ದಾಳೆ.

ವಿಜ್ಞಾನ ವಿಭಾಗ:

ವಿಜ್ಞಾನ ವಿಭಾಗದಲ್ಲಿ ಈ ಬಾರಿ 12,471 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 11,412 (ಶೇ.91.51) ಪಾಸಾಗಿದ್ದಾರೆ. ಹುಬ್ಬಳ್ಳಿಯ ಪ್ರೇರಣಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ರಡ್ಡೇರ 600ಕ್ಕೆ 596 ಅಂಕ (ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಿಂತ ಮೂರು ಅಂಕಗಳ ಅಂತರ) ಪಡೆದು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹುಬ್ಬಳ್ಳಿಯ ಓರಿಯಂಟಲ್‌ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಹುರಳಿಕೊಪ್ಪಿ ಹಾಗೂ ವಿದ್ಯಾನಿಕೇತನ ಕಾಲೇಜಿನ ಸ್ಥಾವನ್‌ ಇನಾಮದಾರ ತಲಾ 595 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿಯ ಬೇಸ್‌ ಪಿಯು ಕಾಲೇಜಿನ ಲಕ್ಷ್ಮಿ ಜ್ಯೋತಿ 593 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ.

ವಾಣಿಜ್ಯ ವಿಭಾಗ:

ವಾಣಿಜ್ಯ ವಿಭಾಗದಲ್ಲಿ 6396 ವಿದ್ಯಾರ್ಥಿಗಳ ಪೈಕಿ 5187 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ. 81.1ರಷ್ಟು ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲೂ ಸಹ ಹುಬ್ಬಳ್ಳಿಯ ಕಾಲೇಜುಗಳು ಪಾರಮ್ಯ ಪಡೆದಿದ್ದು, ಫಾತೀಮಾ ಕಾಲೇಜಿನ ಐನಾಜ್‌ ಅಧೋನಿ, ಕೆಎಲ್‌ಇ ವಾಣಿಜ್ಯ ಕಾಲೇಜಿನ ಹರ್ಷಿತಾ ಹಾಗೂ ಜೆಜೆ ಪಿಯು ಕಾಲೇಜಿನ ದಿವ್ಯ ಡಂಬಳ ತಲಾ 594 ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಚಿನ್ಮಯಿ ಪಿಯು ಕಾಲೇಜಿನ ಸಿದ್ಧಿ ಗೋಖಲೆ 592 ಅಂಕ ಪಡೆದು ದ್ವಿತೀಯ ಹಾಗೂ ಕೆಎಲ್‌ಇ ವಾಣಿಜ್ಯ ಕಾಲೇಜಿನ ಗಣೇಶ ಕಾಟೇವಾಲೆ 591 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಶ್ರಾವಣಿ ರಾಜ್ಯಕ್ಕೆ 2ನೇ ರ್‍ಯಾಂಕ್‌:

ಇನ್ನು, ಕಲಾ ವಿಭಾಗದಲ್ಲಿ 5481 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 3,689 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.67.31ರಷ್ಟು ಸಾಧನೆ ಮಾಡಿದ್ದಾರೆ. ಧಾರವಾಡದ ಜೆಎಸ್‌ಎಸ್‌ ಕಲಾ ಕಾಲೇಜಿನ ಶ್ರಾವಣಿ ಪಾಟೀಲ 595 ಅಂಕ ಪಡೆದು ರಾಜ್ಯಕ್ಕೆ 2ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕರ್ನಾಟಕ ಕಾಲೇಜಿನ ಲಾಲಯ್ಯ 592 ಅಂಕ ಪಡೆದು ದ್ವಿತೀಯ, ಸಾಧನಾ ತೋರಗಲ್‌ಮಠ 591 ಅಂಕ ಪಡೆದು ತೃತೀಯ ಹಾಗೂ ಕರ್ನಾಟಕ ಕಾಲೇಜಿನ ಅಪೂರ್ವ ಕರಡಿಗುದ್ದಿ 590 ಅಂಕ ಪಡೆದು 4ನೇ ಸ್ಥಾನ ಪಡೆದಿದ್ದಾರೆ.