ಸಾರಾಂಶ
ಗದಗ:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆ ರಾಜ್ಯಕ್ಕೆ 25ನೇ ಸ್ಥಾನವನ್ನು ಪಡೆದಿದೆ. ಕಳೆದ ಸಾಲಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಜಿಲ್ಲೆ ಪ್ರಸಕ್ತ ಸಾಲಿನಲ್ಲಿ 7 ಸ್ಥಾನ ಮೇಲಕ್ಕೆ ಬಂದಿರುವುದು ಕೊಂಚ ಸಮಾಧಾನ ತಂದಿದೆ.
ಕಳೆದ ಸಾಲಿನಲ್ಲಿ ಶೇ 72.86ರಷ್ಟು ಒಟ್ಟು ಫಲಿತಾಂಶ ಪಡೆದಿದ್ದರೂ ಜಿಲ್ಲೆ 32ನೇ ಸ್ಥಾನಕ್ಕೆ ಕುಸಿಯಲ್ಪಟ್ಟಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಶೇ 66.64ರಷ್ಟು ಫಲಿತಾಂಶ ದಾಖಲಿಸಿರುವ ಜಿಲ್ಲೆ, ಜಿಲ್ಲಾವಾರು ಫಲಿತಾಂಶ ಪಟ್ಟಿಯಲ್ಲಿ ಉತ್ತಮ ಸುಧಾರಣೆ ಕಂಡಿದೆ. ಆದರೆ ಒಟ್ಟು ಶೇಕಡಾವಾರು ಫಲಿತಾಂಶದಲ್ಲಿ ಶೇ. 6.22 ಕುಸಿತ ಕಂಡಿದೆ.ವಿದ್ಯಾರ್ಥಿಗಳ ವಿವರ: ಜಿಲ್ಲೆಯ 4440 ವಿದ್ಯಾರ್ಥಿಗಳು ಹಾಗೂ 5896 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 10336 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 2502 ವಿದ್ಯಾರ್ಥಿಗಳು ಮತ್ತು 4386 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 6888 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದವರಲ್ಲಿ ಹಾಗೂ ಉತ್ತೀರ್ಣರಾದವರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಾಗಿದ್ದು, ಉತ್ತೀರ್ಣರಾದ ಶೇಕಡಾವಾರು ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಶೇ 56.35 ಮತ್ತು ವಿದ್ಯಾರ್ಥಿನಿಯರು ಶೇ 74.97 ತೇರ್ಗಡೆ ಹೊಂದಿದ್ದಾರೆ. ಶೇ 18.62ರಷ್ಟು ಹೆಚ್ಚಿನ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿರುವುದು ಈ ಬಾರಿಯ ವಿಶೇಷವಾಗಿದೆ.
ಫಲಿತಾಂಶ ಹೆಚ್ಚಿಸಲು ಜಿಲ್ಲೆಯಾದ್ಯಂತ ಪ್ರತಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಓದುವ, ಬರೆಯುವ ಮಾತನಾಡುವ ಕೌಶಲ್ಯವನ್ನು ಆರಂಭದಿಂದಲೇ ಜಾರಿಗೊಳಿಸಿರುವುದು, ವಿದ್ಯಾರ್ಥಿಗಳಲ್ಲಿ ಶುದ್ಧ ಬರಹವನ್ನು ಶುದ್ಧೀಕರಿಸುವ ಕ್ರಮ, ಶೈಕ್ಷಣಿಕ ವರ್ಷ ಆರಂಭದಿಂದಲೇ ಉಪನ್ಯಾಸಕರಿಗೆ ಫಲಿತಾಂಶ ಹೆಚ್ಚಿಸುವ ತರಬೇತಿಗಳು, ಪ್ರತಿ ಕಾಲೇಜಿನ ವಿದ್ಯಾರ್ಥಿ/ನಿಯರಿಗೆ ಹಾಗೂ ಉಪನ್ಯಾಸಕರಿಗೆ ಪ್ರತಿ ಭಾನುವಾರ ವಿಶೇಷ ತರಗತಿಗಳನ್ನು ನಡೆಸಿ, ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ ನಡೆಸಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಫಲಿತಾಂಶ ಅಲ್ಪ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ.ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ: ಕಲಾ ವಿಭಾಗದಲ್ಲಿ ಮುಂಡರಗಿಯ ಜೆ.ಎ.ಪ.ಪೂ.ಕಾಲೇಜಿನ ವಿಜಯಲಕ್ಷ್ಮಿ ಗೊನಬಾಳ 587 ಅಂಕ ಪಡೆದು (97.83) ಪ್ರಥಮ, ಗಜೇಂದ್ರಗಡದ ಎಸ್.ಎಂ. ಭೂಮರಡ್ಡಿ ಪಪೂ ಕಾಲೇಜಿನ ಸೌಂದರ್ಯ ವಿ. ನಿಂಬಾಲಗುಂದಿ 578 ಅಂಕ ಪಡೆದು (96.33) ದ್ವಿತೀಯ, ಲಕ್ಷ್ಮೇಶ್ವರದ ಎಸ್.ಎಂ.ಜೆ.ವಿ.ಪಪೂ ಕಾಲೇಜಿನ ಅಪ್ಸಾನಾ ಬೇಗಂ ಬಿ ನದಾಫ್ 576 ಅಂಕ ಪಡೆದು (96) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಗದುಗಿನ ಜೆ.ಟಿ.ಪಪೂ ಕಾಲೇಜಿನ ನವತಿಕ ಬಿ. ಹಜಾರಿ 592 ಅಂಕ ಪಡೆದು (98.66) ಪ್ರಥಮ, ಎ.ಎಸ್.ಎಸ್. ಪಪೂ ಕಾಲೇಜು ಬೆಟಗೇರಿಯ ವಿಜಯರಾಜ ಎನ್. ಸಿದ್ದಲಿಂಗ 590 ಅಂಕ ಪಡೆದು (98.33) ದ್ವಿತೀಯ ಹಾಗೂ ಎಸ್.ಎ. ಪಪೂ ಕಾಲೇಜು ಗಜೇಂದ್ರಗಡ ನಮ್ರತಾ ಸಿ. ಪಾಟೀಲ588 ಅಂಕ ಪಡೆದು (98) ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಗದುಗಿನ ಜೆ.ಟಿ.ಪಪೂ ಕಾಲೇಜಿನ ಹಿರೇಗೌಡ್ರ ಕಾವ್ಯ 590 ಅಂಕ ಪಡೆದು (98.33) ಪ್ರಥಮ, ನರೇಗಲ್ಲಿನ ಎಸ್.ಎ. ಪಪೂ ಕಾಲೇಜಿನ ಕುಸುಮ ಪಟ್ಟಣಶೆಟ್ಟಿ 582 ಅಂಕ ಪಡೆದು (97) ದ್ವಿತೀಯ, ಲಕ್ಷ್ಮೇಶ್ವರದ ಸರಕಾರಿ ಪಪೂ ಕಾಲೇಜಿನ ಲಕ್ಷ್ಮಿ ವೈ. ಜಗಳೂರು 580 ಅಂಕ ಪಡೆದು (96.66) ತೃತೀಯ ಸ್ಥಾನ ಪಡೆದಿದ್ದಾರೆ.
ಒಟ್ಟು ಫಲಿತಾಂಶ ಕುಸಿತ: ರಾಜ್ಯದ ಫಲಿತಾಂಶ ಪಟ್ಟಿಯಲ್ಲಿ ಗದಗ ಜಿಲ್ಲೆ ಕೊಂಚ ಉತ್ತಮ ಸಾಧನೆ ಮಾಡಿರುವುದು ವಿದ್ಯಾರ್ಥಿಗಳ ವೈಯಕ್ತಿಕ ಸಾಧನೆಯಿಂದ ಸಾಧ್ಯವಾಗಿದೆ. ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಕುಸಿತವಾಗಿರುವುದು ಮಾತ್ರ ಅತ್ಯಂತ ಬೇಸರದ ಸಂಗತಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಇನ್ನು ಹೆಚ್ಚಿನ ಕಾಳಜಿ ವಹಿಸಬೇಕಿದೆ.