ದ್ವಿತೀಯ ಪಿಯುಸಿ ಪರೀಕ್ಷೆ, ಪಾರದರ್ಶಕ ಆಗಿರಲಿ-ಜಿಲ್ಲಾಧಿಕಾರಿ

| Published : Feb 26 2025, 01:05 AM IST

ದ್ವಿತೀಯ ಪಿಯುಸಿ ಪರೀಕ್ಷೆ, ಪಾರದರ್ಶಕ ಆಗಿರಲಿ-ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾ.1ರಿಂದ 20ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಹಾಗೂ ಪಾರದರ್ಶಕವಾಗಿ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಗದಗ: ಮಾ.1ರಿಂದ 20ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಹಾಗೂ ಪಾರದರ್ಶಕವಾಗಿ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರೀಕ್ಷೆ ನಡೆಯುವ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು. ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅಗತ್ಯವಿರುವ ಗಾಳಿ, ಬೆಳಕು ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕೇಂದ್ರಗಳ ಮುಖ್ಯಸ್ಥರು ಆದ್ಯತೆ ಮೇರೆಗೆ ಮಾಡಬೇಕು ಎಂದರು. ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮ, ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು, ಸ್ಥಳೀಯ ನಿರೀಕ್ಷಣಾಧಿಕಾರಿ, ಮಾರ್ಗಾಧಿಕಾರಿಗಳನ್ನು ಮತ್ತು ತ್ರಿಸದಸ್ಯ ಸಮಿತಿಯನ್ನು ನೇಮಿಸಲಾಗಿದೆ. ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಸೂಚಿಸಿದರು.ಪ್ರತಿಬಂಧಕಾಜ್ಞೆ ಜಾರಿ: ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಮಾ.1ರಿಂದ 20ರ ವರೆಗೆ ಬೆಳಗಿನ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಐದು ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ಹಾಗೂ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರಗಳ ಪ್ರವೇಶವನ್ನು ನಿರ್ಬಂಧಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್‌ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಬಂದು ಮಾಡಲು ಆದೇಶಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆ ನಿರ್ಬಂಧಿಸಿದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರಹೋಗುವ ನಮಯದಲ್ಲಿ ಮಾತ್ರ ಚಿತ್ರೀಕರಿಸಲು ಮಾಧ್ಯಮದವರಿಗೆ ಅವಕಾಶವಿದ್ದು ಪರೀಕ್ಷಾ ಗೌಪ್ಯತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ಯಾಮೆರಾ ಹೊಂದಿರದ ಸಾಮಾನ್ಯ ಮೊಬೈಲ್ ಇರಿಸಿಕೊಳ್ಳಲು ಅವಕಾಶವಿದ್ದು, ಉಳಿದ ಎಲ್ಲ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನ್ನು ತರುವುದನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರತಿಬಂಧಿಸಿದ ಯಾವುದೇ ವಸ್ತುಗಳನ್ನು ಸಂಬಂಧಪಟ್ಟವರು ಪರೀಕ್ಷಾ ಕೇಂದ್ರದಡಿ ತೆಗೆದುಕೊಂಡು ಹೋಗಲು ನಿರ್ಬಂಧಿಸಿದೆ ಎಂದರು.

ಜಿ.ಪಂ. ಸಿಇಓ ಭರತ್ ಎಸ್. ಮಾತನಾಡಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಸುವ್ಯವಸ್ಥಿತವಾಗಿ ಜರುಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ ಮಾತನಾಡಿ. 11904 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಸುಗಮವಾಗಿ ಜರುಗಲು ಕ್ರಮ ವಹಿಸಲಾಗಿದೆ ಎಂದರು. ಸಭೆಯಲ್ಲಿ ಪರೀಕ್ಷಾ ಕೇಂದ್ರಗಳ ಸ್ವಚ್ಛತೆ, ಸಿ.ಸಿ.ಟಿವಿ ಅಳವಡಿಕೆ, ಸೂಕ್ತ ಬಂದೋಬಸ್ತ್ ಕುರಿತು ಚರ್ಚಿಸಲಾಯಿತು. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.