ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕೇರಳದ ಮಲಪ್ಪುರಂ ಮಾದರಿಯಲ್ಲೇ ಕರ್ನಾಟಕದ ತುಳುನಾಡು ದ.ಕ.ಜಿಲ್ಲೆಯನ್ನು ಇನ್ನೊಂದು ಮಲಪ್ಪುರಂ ಮಾಡಲು ಕಾಂಗ್ರೆಸ್‌ನಿಂದ ರಹಸ್ಯ ರಾಜಕೀಯ ವ್ಯೂಹದ ಪ್ರಯೋಗ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಗಂಭೀರ ಆರೋಪಿಸಿದ್ದಾರೆ.ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ಗೆಲ್ಲುವ ಸಾಮರ್ಥ್ಯ ಇಲ್ಲದೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವಯನಾಡ್‌ನಲ್ಲಿ ಶೇ.70ರಷ್ಟು ಮುಸ್ಲಿಂ ಮತಗಳಿದೆ. ಅಲ್ಲಿ ಭವಿಷ್ಯಕ್ಕಾಗಿ ಮುಸ್ಲಿಂ ಲೀಗ್ ಜತೆಗಿನ ಒಳಒಪ್ಪಂದದಂತೆ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಬಾವುಟ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಇದನ್ನು ಕೇರಳ ಕಾಂಗ್ರೆಸ್ ಅಧ್ಯಕ್ಷರೇ ಹೇಳಿರುವುದನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದರ ಮುಂದುವರಿದ ಭಾಗವೇ ಕರಾವಳಿಯಲ್ಲಿ ಹಿಂದುತ್ವವನ್ನು ಮಟ್ಟಹಾಕಲು ಬಿಲ್ಲವ, ಕುಲಾಲ, ಬಂಟ ಮತ್ತಿತರ ಜಾತಿಗಳನ್ನು ವಿಭಜಿಸುವ ಹುನ್ನಾರ ನಡೆಯುತ್ತಿದೆ. ಇದರ ಟೂಲ್‌ಕಿಟ್ ಭಾಗವೇ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಎಂದು ಆರೋಪಿಸಿದರು.
ಬಿಲ್ಲವರಿಗೆ ಬಿಜೆಪಿ ಸಹಾಯ:ಲೇಡಿಹಿಲ್‌ನಲ್ಲಿ ನಾರಾಯಣಗುರು ವೃತ್ತ ನಾಮಕರಣ ಹಾಗೂ ಪ್ರತಿಮೆ ಸ್ಥಾಪನೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಈ ಪ್ರತಿಮೆ ಸ್ಥಾಪನೆ ಹಿಂದೆ ಬಿಜೆಪಿ ಶ್ರಮವಿದೆ. ಕಾಂಗ್ರೆಸ್ ಬಿಲ್ಲವರಿಗೆ ಏನೂ ಮಾಡಿಲ್ಲ, ನಾರಾಯಣಗುರುವಿಗೆ, ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿಗೆ ಅವಮಾನ ಆದಾಗ ಯಾವ ಬಿಲ್ಲವ ಸಂಘಟನೆಗಳೂ ವಿರೋಧಿಸಿಲ್ಲ, ಪ್ರತಿಭಟನೆ ನಡೆಸಿಲ್ಲ. ಈಗ ಬಿಲ್ಲವ ಮಹಾಮಂಡಲ ಅಧ್ಯಕ್ಷರು ಒಂದು ಪಕ್ಷದ ಕುರಿತು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ, ಓರ್ವ ಜಾತಿ ಸಂಘಟನೆಯ ಪ್ರಮುಖರಾಗಿದ್ದುಕೊಂಡು ಈ ರೀತಿ ಪಕ್ಷವೊಂದನ್ನು ಬೆಂಬಲಿಸುವುದು ಸರಿಯಲ್ಲ. ಸಂಘಟನೆಗೆ ರಾಜಿನಾಮೆ ನೀಡಿ ಹೊರಬಂದು ಕಾಂಗ್ರೆಸ್ ಪರ ಪ್ರಚಾರ ನಡೆಸಲಿ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು. ಬಿಲ್ಲವರು ರಾಷ್ಟ್ರವಾದಿಗಳು:
ಬಿಲ್ಲವರು ಯಾವತ್ತೂ ಜಾತಿವಾದಿಗಳಲ್ಲ, ರಾಷ್ಟ್ರವಾದಿಗಳು. ಆದರೆ ಸಮುದಾಯದ ಸಂಘಟನೆ ಹೆಸರಿನಲ್ಲಿ ಕೆಲವರು ಬಿಲ್ಲವರ ಹಾದಿತಪ್ಪಿಸುವ ಕೆಲಸಕ್ಕೆ ಇಳಿದಿದ್ದಾರೆ. ಈ ಬಗ್ಗೆ ಬಿಲ್ಲವರು ಎಚ್ಚೆತ್ತುಕೊಳ್ಳಬೇಕು. ಜಾತಿವಾದಿಗಳಾದರೆ ಭವಿಷ್ಯವಿಲ್ಲ, ವಿಲನ್ ಆಗಬೇಡಿ. ರಾಷ್ಟ್ರಹಿತದ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಮುಖಂಡರಾದ ನಿತಿನ್ ಕುಮಾರ್, ರಾಜಗೋಪಾಲ ರೈ ಇದ್ದರು. ಚುನಾವಣೆಗಾಗಿ ಧಾರ್ಮಿಕ ಆಚರಣೆಗೆ ಅಡ್ಡಿ ಬೇಡ
ಏ.26ರಂದು ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಏ.24ರಿಂದ 26ರ ವರೆಗೆ ದ.ಕ.ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಈ ದಿನಗಳಲ್ಲಿ ಕರಾವಳಿಯಲ್ಲಿ ಭೂತಕೋಲ, ನೇಮಗಳು ನಡೆಯುತ್ತಿರುತ್ತವೆ. ಇವುಗಳಿಗೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಇದನ್ನು ಜಿಲ್ಲಾ ಚುನಾವಣಾಧಿಕಾರಿಗಳು ಅರಿತುಕೊಳ್ಳಬೇಕು ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.