ಸಾರಾಂಶ
ಮರು ಮೌಲ್ಯಮಾಪನದಲ್ಲಿ 3 ಅಂಕ ಹೆಚ್ಚು ಗಳಿಸುವ ಮೂಲಕ ಇಲ್ಲಿಯ ಪ್ರಥ್ವೀಶ್ ಈ ಸಾಧನೆ ಮಾಡಿದವರ ಸಾಲಿನಲ್ಲಿ ಸೇರಿದ್ದಾನೆ.
ರಾಣಿಬೆನ್ನೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಣಿಬೆನ್ನೂರಿನ ಪೃಥ್ವಿಶ್ ಗೋವಿಂದ ಗೊಲ್ಲರಹಳ್ಳಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಮರು ಮೌಲ್ಯಮಾಪನದಲ್ಲಿ 3 ಅಂಕ ಹೆಚ್ಚು ಗಳಿಸುವ ಮೂಲಕ ಇಲ್ಲಿಯ ಪ್ರಥ್ವೀಶ್ ಈ ಸಾಧನೆ ಮಾಡಿದವರ ಸಾಲಿನಲ್ಲಿ ಸೇರಿದ್ದಾನೆ.ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯ ನಿವಾಸಿ ಪೃಥ್ವಿಶ್ ಗೋವಿಂದ ಗೊಲ್ಲರಹಳ್ಳಿ ಎಂಬಾತ ತಾಲೂಕಿನ ಮಾಕನೂರಿನ ಮೊರಾರ್ಜಿ ವಸತಿಶಾಲೆಯ ವಿದ್ಯಾರ್ಥಿ. ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳನ್ನು ಪಡೆದಿದ್ದ. ವಿಜ್ಞಾನ ವಿಷಯದಲ್ಲಿ 97 ಅಂಕಗಳನ್ನು ಗಳಿಸಿದ್ದ. ಆದರೆ ಆತನಿಗೆ ತೃಪ್ತಿ ಆಗದ ಕಾರಣ ಅವನು ಉತ್ತರ ಪತ್ರಿಕೆಯ ಮರುಮೌಲ್ಯಮಾಪನ ಮಾಡಿಸಿದಾಗ ವಿಜ್ಞಾನದಲ್ಲಿಯೂ 100 ಅಂಕಗಳನ್ನು ಗಳಿಸಿ ಒಟ್ಟಾರೆ 625 ಅಂಕ ಗಳಿಸಿದ್ದಾನೆ. ತಾಯಿ ಮಮತಾ ನಗರದ ಲಯನ್ಸ್ ಶಾಲೆಯಲ್ಲಿ ಬಿಸಿಯೂಟದ ಸಹಾಯಕಿ. ತಂದೆ ಸೆಕ್ಯುರಿಟಿ ಗಾರ್ಡ್. ಅತಿ ಬಡತನಲ್ಲಿಯೇ ಬೆಳೆದು ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದ ಪೃಥ್ವಿಶ್ ಈಗ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಮಗನ ಈ ಸಾಧನೆ ತಂದೆ-ತಾಯಿಗೆ ಸಂಭ್ರಮ ತಂದಿದೆ.
ಆತನ ಜಾಣ್ಮೆಯ ಮೇಲೆ ನಮಗೆ ನಂಬಿಕೆ, ವಿಶ್ವಾಸವಿತ್ತು. ಇದೀಗ ಫಲಿತಾಂಶ ಬಹಳಷ್ಟು ಸಂತಸ ತಂದಿದೆ. ಮುಂದೆ ಐಎಎಸ್ ಓದುವ ಅಭಿಲಾಷೆ ಹೊಂದಿರುವ ಮಗನಿಗೆ ಸಮಾಜವೇ ಕೈಹಿಡಿಬೇಕಾಗಿದೆ ಎಂದು ತಾಯಿ ಮಮತಾ, ತಂದೆ ಗೋವಿಂದ ಅಭಿಪ್ರಾಯಪಟ್ಟರು.ವಿದ್ಯಾರ್ಥಿಯ ಮಾತು: ನನಗೆ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ಪಾಸ್ ಆಗುತ್ತೇನೆ ಎಂಬ ದೊಡ್ಡ ವಿಶ್ವಾಸ ಇತ್ತು. ಹಿಂದಿ ವಿಷಯದಲ್ಲಿ ಕೇವಲ ಎರಡು ತಾಸುಗಳಲ್ಲಿ ಉತ್ತರ ಪತ್ರಿಕೆ ಬರೆದು ಮುಗಿಸಿದ್ದೆ. ಉಳಿದ ವಿಷಯಗಳ ಉತ್ತರ ಪತ್ರಿಕೆಗಳನ್ನು ನಿಗದಿತ ಸಮಯಕ್ಕಿಂತ 10- 15 ನಿಮಿಷ ಮುಂಚಿತವಾಗಿ ಮುಗಿಸುತ್ತಿದ್ದೆ. ಹೆಚ್ಚಿನ ಪರಿಶ್ರಮದಿಂದ ನನಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಯಿತು. ಇದೀಗ ವಿಜ್ಞಾನ ವಿಭಾಗಕ್ಕೆ ಸೇರಿರುವೆ. ಮುಂದೆ ಐಎಎಸ್ ಓದುವ ಆಸೆ ಇದೆ. ವಿದ್ಯಾರ್ಥಿಗೆ ಶಾಸಕರ ಅಭಿನಂದನೆಶಾಸಕ ಪ್ರಕಾಶ ಕೋಳಿವಾಡ ಅವರು ಪೃಥ್ವಿಶ್ ಮನೆಗೆ ತೆರಳಿ ಆತನಿಗೂ ಹಾಗೂ ಆತನ ತಂದೆ ತಾಯಿಗಳಿಗೆ ಅಭಿನಂದನೆ ಸಲ್ಲಿಸಿದರಲ್ಲದೆ ಒಂದು ಲ್ಯಾಪ್‌ಟಾಪ್ ನೀಡಿ ಶುಭಕೋರಿದರು.