ಭದ್ರತಾ ಸಿಬ್ಬಂದಿಗೆ ವೇತನವಿಲ್ಲದೇ ತೊಂದರೆ

| Published : Apr 08 2024, 01:08 AM IST

ಭದ್ರತಾ ಸಿಬ್ಬಂದಿಗೆ ವೇತನವಿಲ್ಲದೇ ತೊಂದರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಡ ಕಾರ್ಮಿಕರಿಗೆ ನೀಡುವ ಹಣದಲ್ಲೇ ಕಮೀಷ್‍ನ ಪಡೆಯುವ ಏಜೆನ್ಸಿಯವರು ಈ ರೀತಿ ಮೋಸ ಮಾಡಿರುವುದು ಎಷ್ಟು ಸರಿ? ಇವರಿಗೆ ನ್ಯಾಯ ನೀಡುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಗೋಕರ್ಣ: ಇಲ್ಲಿನ ಕೋಟಿತೀರ್ಥದಲ್ಲಿ ಈ ಹಿಂದೆ ಗ್ರಾಮ ಪಂಚಾಯಿತಿ ಖಾಸಗಿ ಭದ್ರತಾ ಏಜೆನ್ಸಿಯಿಂದ ನಿಯೋಜಿಸಿದ್ದ ಮೂವರು ಭದ್ರತಾ ಸಿಬ್ಬಂದಿಗೆ ಮೂರು ತಿಂಗಳ ವೇತನ ನೀಡಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕೆ ಗ್ರಾಪಂ ಅಧಿಕಾರಿಗಳನ್ನು ವಿಚಾರಿಸಿದಾಗ, ಭದ್ರತಾ ಏಜೆನ್ಸಿಯ ಮೂಲಕ ನೇಮಿಸಿದ್ದು, ಇವರಿಗೆ ತಾವು ಸಂಪೂರ್ಣ ಹಣವನ್ನು ಪಾವತಿಸಿದ್ದೇವೆ ಎಂದಿದ್ದಾರೆ. ಆರು ತಿಂಗಳ ಹಿಂದೆ ಈ ಸಿಬ್ಬಂದಿಯನ್ನು ತೆಗೆಯಲಾಗಿದೆ. ಇದು ವರೆಗೂ ಹಿಂದಿನ ಪಗಾರ ನೀಡಿಲ್ಲ. ಆದರೆ, ಬಡ ಕಾರ್ಮಿಕರಿಗೆ ನೀಡುವ ಹಣದಲ್ಲೇ ಕಮೀಷ್‍ನ ಪಡೆಯುವ ಏಜೆನ್ಸಿಯವರು ಈ ರೀತಿ ಮೋಸ ಮಾಡಿರುವುದು ಎಷ್ಟು ಸರಿ? ಇವರಿಗೆ ನ್ಯಾಯ ನೀಡುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.

2022ರ ಸೆಪ್ಟೆಂಬರ್‌ನಲ್ಲಿ ಕೋಟಿತೀರ್ಥದ ಸುತ್ತ ಮತ್ತು ನೀರಿನಲ್ಲಿ ನಿರುಪಯುಕ್ತ ವಸ್ತುಗಳನ್ನು ಎಸೆಯದಂತೆ ಹಾಗೂ ನೀರಿಗಿಳಿದು ಅಪಾಯ ಮಾಡಿಕೊಳ್ಳದಂತೆ ಬರುವ ಯಾತ್ರಿಕರಿಗೆ ತಿಳಿವಳಿಕೆ ನೀಡಲು ಲೀಡ್ ಸೆಕ್ಯುರಿಟಿ ಏಜೆನ್ಸಿಯ ಮೂಲಕ ಮೂವರು ಭದ್ರತಾ ಸಿಬ್ಬಂದಿ ನೇಮಿಸಿತ್ತು. ನಂತರ ಜೂನ್‌ ತಿಂಗಳಲ್ಲಿ ಕೋಟಿತೀರ್ಥ ನಿರ್ವಹಣೆಗಾಗಿ ಪ್ರತ್ಯೇಕ ಟೆಂಡರ್ ಕರೆಯಲಾಗಿತ್ತು. ಬಳಿಕ ಸಂಪೂರ್ಣ ನಿರ್ವಹಣೆ ಮುಂದೆ ಟೆಂಡರದಾರರಾಗಿರುವುದರಿಂದ ಖಾಸಗಿ ಭದ್ರತಾ ಸೇವೆಯನ್ನು ಗ್ರಾಪಂ ನಿಲ್ಲಿಸಿ ಅಲ್ಲಿ ವರೆಗಿನ ಹಣವನ್ನು ಏಜೆನ್ಸಿಗೆ ಪಾವತಿಸಿತ್ತು.

ಭದ್ರತಾ ಏಜೆನ್ಸಿಗೆ ಇಲ್ಲವೇ ಮಾನವೀಯತೆ?: ಕನಿಷ್ಠ ವೇತನಕ್ಕೆ ಬಿಸಿಲು- ಮಳೆ ಎನ್ನದೆ ಬಯಲಲ್ಲಿ ನಿಂತು ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹಣ ನೀಡದಿರುವುದರ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಕನಿಷ್ಠ ಮಾನವೀಯತೆ ಇಲ್ಲದ ಏಜೆನ್ಸಿಯವರ ಮೇಲೆ ಸಂಬಂಧಿಸಿದ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.