ಸಾರಾಂಶ
ನಾನು ಎಂಬ ಅಹಂಭಾವ ಸಂಪೂರ್ಣ ಅಳಿಯಲಿ: ಉಪಪ್ರಾಚಾರ್ಯ ಶರಣಪ್ಪ ಸೋಮಲಾಪುರ
ಕನ್ನಡಪ್ರಭ ವಾರ್ತೆ ಕಾರಟಗಿಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಗಂಡುಗಲಿ ಕುಮಾರರಾಮನ ಅಭಿಮಾನಿಗಳ ಬಳಗ ಮತ್ತು ಸ್ನೇಹ ಬಳಗದ ಸಹಯೋಗದಲ್ಲಿ ಡಾ. ನಿಂಗು ಸೊಲಗಿಯವರ ನನ್ನಿನ್ನ ನಗಿ ನೋಡಿ ದಾಂಪತ್ಯ ಗೀತ ನಾಟಕವನ್ನು ಬಾಗಲಕೋಟೆಯ ಸಂಗಮ ಕಲಾ ತಂಡ ಪ್ರದರ್ಶಿಸಿತು.
ಹೊಸದಾಗಿ ಮದುವೆಯಾದ ಗಂಡ-ಹೆಂಡತಿರಿಬ್ಬರ ನಡುವಿನ ಬದುಕನ್ನು ದಾಂಪತ್ಯ ಗೀತವಾಗಿ ರೂಪಾಂತರವಾಗುವುದನ್ನು ನಾಟಕ ವಿವರಿಸುತ್ತದೆ.ನಾಟಕದ ಕುರಿತು ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಪ್ರಾಚಾರ್ಯ ಶರಣಪ್ಪ ಸೋಮಲಾಪುರ ಮಾತನಾಡಿ, ದಾಂಪತ್ಯವೆಂದರೆ ಅದು ಹಗಲು-ರಾತ್ರಿಗಳಂತೆ, ಶೀತೋಷ್ಣಗಳಂತೆ, ಪರಸ್ಪರ ಪೂರಕವಾಗಿರುವಂತಹದ್ದು. ಮತ್ತೊಂದರ ಇರುವಿಕೆಯಿಂದಲೇ ಪರಿಪೂರ್ಣತೆ ಹೊಂದುವಂಥದ್ದು. ಹೀಗೆ ಎರಡು ವಿಭಿನ್ನ ವ್ಯಕ್ತಿತ್ವಗಳು ಒಂದಾಗ-ಬೇಕೆಂದರೆ ಇಬ್ಬರ ಕಡೆಯಿಂದಲೂ ನಾನು ಎಂಬ ಅಹಂಭಾವ ಸಂಪೂರ್ಣ ಅಳಿಯಬೇಕು. ಪರಸ್ಪರ ಸಮರ್ಪಣಾ ಭಾವ ಮೂಡಬೇಕು. ಶ್ರೇಷ್ಠ-ಕನಿಷ್ಠಗಳ ತರತಮ ಇಲ್ಲವಾಗಬೇಕು. ಆಗಲೇ ಗಂಡು-ಹೆಣ್ಣಿನ ಜೀವಮಾನದ ಗೆಳೆತನ ಸುಖಿ ದಾಂಪತ್ಯವಾಗಿ ಬದಲಾಗುತ್ತದೆ. ದಾಂಪತ್ಯವನ್ನು ಈ ನಿಟ್ಟಿನಲ್ಲಿ ಅರ್ಥೈಸಿಕೊಂಡು ಮುನ್ನಡೆದರೆ ಸಂಸಾರ ಸಾರಪೂರ್ಣವಾಗುತ್ತದೆ ಎನ್ನುವುದನ್ನು ಇಂದಿನ ದಾಂಪತ್ಯ ಗೀತ ನಾಟಕ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ವೇಳೆ ಕಲಾ ತಂಡದ ಕಲಾವಿದರಾದ ಶ್ರೀಕಾಂತ ಮತ್ತು ಅಕ್ಕುಶ್ರೀ ನವಲಗರಿ ಅವರನ್ನು ಬಳಗದಿಂದ ಗೌರವಿಸಲಾಯಿತು.ಗಂಡುಗಲಿ ಕುಮಾರರಾಮನ ಬಳಗದ ಪ್ರಮುಖರಾದ ಹನುಮಂತಪ್ಪ ತೊಂಡಿಹಾಳ, ಸೋಮನಾಥ್ ಹೆಬ್ಬಡದ, ರಾಘವೇಂದ್ರ ಕಂಠಿ, ಮಾರುತಿ, ಶಿವರಾಜಕುಮಾರ ಬೆನ್ನೂರು, ಮುರುಗರಾಜ್ ಪಾಟೀಲ್, ರಮೇಶ ಬನ್ನಿಕೊಪ್ಪ, ಗಂಗಣ್ಣ ವಂದಾಲಿ, ಚನ್ನಬಸವ ಆಸ್ಪರಿ, ಗುರುಬಸಪ್ಪ ಪಟ್ಟಣಶೆಟ್ಟಿ, ಪ್ರಹ್ಲಾದ ಜೋಶಿ, ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಚನ್ನಬಸಪ್ಪ ವಕ್ಕಳದ, ಬಸವರಾಜ್ ರ್‍ಯಾವಳದ ಸೇರಿದಂತೆ ಇತರರು ಇದ್ದರು.