ನಾನು ಮಾಡಿದ ಕೆಲಸ ನೋಡಿ ನನಗೆ ಮತ ನೀಡಲಿ-ಬೊಮ್ಮಾಯಿ ಮನವಿ

| Published : May 05 2024, 02:02 AM IST / Updated: May 05 2024, 02:03 AM IST

ಸಾರಾಂಶ

ಯಾವುದೇ ಸಮುದಾಯದವರು ನಾನು ಮಾಡಿರುವ ಕೆಲಸ ನೋಡಿ ನನಗೆ ಮತ ಹಾಕಲಿ ಎಂದು ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಹಾವೇರಿ: ಯಾವುದೇ ಸಮುದಾಯದವರು ನಾನು ಮಾಡಿರುವ ಕೆಲಸ ನೋಡಿ ನನಗೆ ಮತ ಹಾಕಲಿ ಎಂದು ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕುರುಬ ಸಮುದಾಯ ಬಸವರಾಜ ಬೊಮ್ಮಾಯಿಗೆ ಮತ ಹಾಕಬೇಡಿ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕ್ಷೇತ್ರದಲ್ಲಿ ಬಹಳ ದೊಡ್ಡ ಧ್ವನಿಯಲ್ಲಿ ಜನ ಬೆಂಬಲ ಕೊಡುತ್ತಿದ್ದಾರೆ. ಎಲ್ಲಾ ಕಡೆ ಒಳ್ಳೆಯ ಬೆಂಬಲ ಸಿಗುತ್ತಿದೆ. ಮತದಾನದ ದಿನದವರೆಗೂ ಕಾದು ನೋಡೋಣ ಎನ್ನುವ ಜನ ಕೂಡ ಬೆಂಬಲ ಕೊಡುತ್ತಿದ್ದಾರೆ. ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಯಾವುದೇ ಸಮುದಾಯ ಯಾವುದೇ ಒಂದು ಪಕ್ಷದ ಪರವಾಗಿ ಇರುವುದಿಲ್ಲ, ಅದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಇದರ ಅರ್ಥ ಏನು? ಅವರ ಅಭ್ಯರ್ಥಿಗೆ ಅವರ ಸಮಾಜ ಮತ ಹಾಕುತ್ತಿಲ್ಲ ಅಂತಾ ಅರ್ಥ. ಯಾರೂ ಬಿಜೆಪಿಗೆ ಓಟ್ ಹಾಕಬಾರದು ಅಂತ ಹೇಳುತ್ತಾರೆ ಅಂದರೆ ಈಗಾಗಲೇ ಅವರು ಬಿಜೆಪಿಗೆ ಮತ ಹಾಕುತ್ತಿದ್ದಾರೆ ಅಂತ ಅರ್ಥ ಅಲ್ಲವಾ? ಎಂದು ಪ್ರಶ್ನಿಸಿದರು.ಬೊಮ್ಮಾಯಿ ಸಿಎಂ ಇದ್ದಾಗ ಮೋದಿ ತಾಳಕ್ಕೆ ಡ್ಯಾನ್ಸ್ ಮಾಡಿದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನರೇಂದ್ರ ಮೋದಿಯವರ ಸರ್ಕಾರದಲ್ಲಿ ಒಂದು ವ್ಯವಸ್ಥೆ ಇದೆ. ತನ್ನಿಂದ ತಾನೇ ಯೋಜನೆಗಳು ಅನುಷ್ಠಾನ ಆಗುತ್ತವೆ. ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಸರ್ಕಾರದಲ್ಲಿದ್ದಂತೆ ಸಲಾಮ್ ಹೊಡೆದು, ಗೋಗರೆದು ದುಡ್ಡು ತರುವ ಅಗತ್ಯವಿಲ್ಲ. ಸ್ಮಾರ್ಟ್ ಸಿಟಿಗೆ ಅನುದಾನ ಬಂದಿದೆ, ಯಾರಾದರೂ ಹೋಗಿ ಅರ್ಜಿ ಕೊಟ್ಟಿದ್ದರಾ? ೩೦೦೦ ಕಿಮೀ ರಾಷ್ಟ್ರೀಯ ಹೆದ್ದಾರಿಗಳಾಗಿದೆ. ಕೇಂದ್ರದಲ್ಲಿ ಕೆಲಸ ಮಾಡುವ ಹೊಸ ಸಂಸ್ಕೃತಿ ಇದೆ. ವ್ಯಕ್ತಿಗತ ಅಭಿವೃದ್ಧಿಗಿಂತ ವ್ಯವಸ್ಥೆ ಮೇಲೆ ಅಭಿವೃದ್ಧಿ ನರೇಂದ್ರ ಮೋದಿ ತಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್ಸಿಗೆ ಹತ್ತು ವರ್ಷ ಬೇಕು ಎಂದರು.ನಮ್ಮ ಕಾಲದಲ್ಲಿ ಕನಕದಾಸರ ಬಾಡ ಗ್ರಾಮದ ಅಭಿವೃದ್ಧಿ ಆಗಿದೆ. ಯಡಿಯೂರಪ್ಪ ಅವರ ಕಾಲದಲ್ಲಿ ಕಾಗಿನೆಲೆ ಅಭಿವೃದ್ಧಿ ಆಗಿದೆ. ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಮಾಡಿದ್ದೇವೆ. ನಾನು ಓಟಿಗಾಗಿ ಕೆಲಸ ಮಾಡಿಲ್ಲ. ಈಗ ಆಯಾ ಸಮಾಜಗಳಿಗೆ ಮನವರಿಕೆ ಆಗಿದೆ. ಯಾರು ನಮ್ಮವರು ಯಾರು ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ ಅಂತಾ ಮನವರಿಕೆ ಆಗಿದೆ. ಯಾರು ಕಷ್ಟಕ್ಕೆ ಬರ್ತಾರೆ..? ಯಾರು ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಾರೆ ಅನ್ನೋದನ್ನ ಎಲ್ಲಾ ಸಮಾಜದವರೂ ಹೇಳುತ್ತಾರೆ. ಹಾಲು ಮತ ಸಮುದಾಯದವರೂ ಹೇಳುತ್ತಾರೆ ಎಂದರು.