ಕೊಡಗು ಜಿಲ್ಲೆಯಲ್ಲಿ ಬೀಜ, ಗೊಬ್ಬರ ಅಗತ್ಯ ದಾಸ್ತಾನು: ಸೋಮಸುಂದರ

| Published : Jun 01 2024, 12:45 AM IST

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈವರೆಗೆ 316.1 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.30 ರಷ್ಟು ಹೆಚ್ಚಾಗಿ ಮಳೆಯಾಗಿದೆ. ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಯಲ್ಲಿದ್ದು, ಜಿಲ್ಲೆಯಲ್ಲಿ ಭತ್ತದ ಸಸಿ ಮಡಿ ಕಾರ್ಯವು ಜೂನ್ ಅಂತ್ಯದಿಂದ ಪ್ರಾರಂಭವಾಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಸಕ್ತ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈವರೆಗೆ 316.1 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.30 ರಷ್ಟು ಹೆಚ್ಚಾಗಿ ಮಳೆಯಾಗಿದೆ. ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಯಲ್ಲಿದ್ದು, ಜಿಲ್ಲೆಯಲ್ಲಿ ಭತ್ತದ ಸಸಿ ಮಡಿ ಕಾರ್ಯವು ಜೂನ್ ಅಂತ್ಯದಿಂದ ಪ್ರಾರಂಭವಾಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ತಿಳಿಸಿದ್ದಾರೆ.

ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಾಟಿ ಕಾರ್ಯ ಕೈಗೊಳ್ಳಲಾಗುತ್ತದೆ ಹಾಗೂ ಮುಸುಕಿನ ಜೋಳದ ಬಿತ್ತನೆ ಕಾರ್ಯವನ್ನು ಜೂನ್ ತಿಂಗಳಿನಲ್ಲಿ ಕೈಗೊಳ್ಳಲಾಗುತ್ತದೆ. ಆದ್ದರಿಂದ ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರವನ್ನು ದಾಸ್ತಾನೀಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 1871 ಕ್ವಿಂಟಾಲ್ ಭತ್ತ ಮತ್ತು 41 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ದಾಸ್ತಾನೀಕರಿಸುವ ಗುರಿ ಹೊಂದಲಾಗಿದ್ದು, ರೈತರಿಗೆ ಅವಶ್ಯವಿರುವ ವಿವಿಧ ತಳಿಗಳ ಬಿತ್ತನೆ ಬೀಜಗಳನ್ನು ಕೆಎಸ್‌ಎಸ್‌ಸಿ, ಎನ್‌ಎಸ್‌ಸಿ ಹಾಗೂ ಖಾಸಗಿ ಸಂಸ್ಥೆಗಳಿಂದ ಸರಬರಾಜು ಪಡೆದು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ 2024 ರ ಮೇ 30 ರಂತೆ ಒಟ್ಟು 503 ಕ್ವಿಂಟಾಲ್ ಭತ್ತ ಹಾಗೂ 2.4 ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳನ್ನು ದಾಸ್ತಾನೀಕರಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 80,946 ಮೆ.ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರಗಳಿಗೆ ಬೇಡಿಕೆ ಇದ್ದು, ಮೇ 2024 ರ ಅಂತ್ಯದವರೆಗೆ 24,321 ಮೆ.ಟನ್ ರಸಗೊಬ್ಬರ ಬೇಡಿಕೆ ಇದ್ದು, ಒಟ್ಟು 35,062 ಮೆ.ಟನ್ ರಸಗೊಬ್ಬರಗಳು ವಿವಿಧ ಸಹಕಾರ ಸಂಘ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದಾಸ್ತಾನು ಇದೆ. ಜಿಲ್ಲೆಯ ರೈತರ ಬೇಡಿಕೆ ಹಾಗೂ ಗುರಿಯನ್ವಯ ಹಂತ ಹಂತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲಾಗುವುದೆಂದು ತಿಳಿಸಿದ್ದಾರೆ.

2024-25ನೇ ಸಾಲಿನ ಭತ್ತದ ಬಿತ್ತನೆ ಬೀಜ ದಾಸ್ತಾನು ವಿವರ(ಪ್ರಮಾಣ ಕ್ವಿಂ.ಗಳಲ್ಲಿ): ವಿರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿ 70 ಕ್ವಿಂಟಾಲ್, ವಿರಾಜಪೇಟೆ 95 ಕ್ವಿಂ ಒಟ್ಟು 165 ಕ್ವಿಂಟಾಲ್.

ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿ 35 ಕ್ವಿಂ., ಹುದಿಕೇರಿ 15 ಕ್ವಿಂ., ಪೊನ್ನಂಪೇಟೆ 45 ಕ್ವಿಂಟಾಲ್, ಶ್ರೀಮಂಗಲ 35 ಕ್ವಿಂಟಾಲ್ ಒಟ್ಟು 130 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ಲಭ್ಯವಿದೆ.

ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ 23 ಕ್ವಿಂ., ಶಾಂತಳ್ಳಿ 5 ಕ್ವಿಂ, ಕೊಡ್ಲಿಪೇಟೆ 35 ಕ್ವಿಂ., ಒಟ್ಟು 63 ಕ್ವಿಂಟಾಲ್, ಕುಶಾಲನಗರ ತಾಲೂಕಿನ ಕುಶಾಲನಗರ 65 ಕ್ವಿಂ., ಸುಂಟಿಕೊಪ್ಪ 5 ಕ್ವಿಂ. ಒಟ್ಟು 70 ಕ್ವಿಂಟಾಲ್.

ಮಡಿಕೇರಿ ತಾಲೂಕಿನ ಮಡಿಕೇರಿ 15 ಕ್ವಿಂ., ನಾಪೋಕ್ಲು 50 ಕ್ವಿಂ., ಭಾಗಮಂಡಲ 10 ಕ್ವಿಂಟಾಲ್ ಒಟ್ಟು 75 ಕ್ವಿಂಟಾಲ್. ಕೊಡಗು ಜಿಲ್ಲೆಯಲ್ಲಿ ಒಟ್ಟು 503 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ದಾಸ್ತಾನು ಇದೆ.

2024-25 ನೇ ಸಾಲಿನ ಮುಸುಕಿನ ಜೋಳದ ಬಿತ್ತನೆ ಬೀಜ ದಾಸ್ತಾನು ವಿವರ ಇಂತಿದೆ : ಸೋಮವಾರಪೇಟೆಯಲ್ಲಿ 0.8 ಕ್ವಿಂಟಾಲ್, ಕುಶಾಲನಗರ 1.6 ಕ್ವಿಂಟಾಲ್, ಒಟ್ಟು 2.4 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜ ದಾಸ್ತಾನು ಇದೆ.

ಕೊಡಗು ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ದಾಸ್ತಾನು ವಿವರ ಇಂತಿದೆ. ಜಿಲ್ಲೆಯಲ್ಲಿ ಯೂರಿಯಾ 9334.91, ಡಿಎಪಿ 2495.8, ಎಂಒಪಿ 4992.89, ಎನ್‌ಪಿಕೆಎಸ್ 17534.32, ಎಸ್‌ಎಸ್‌ಪಿ 704.1 ಒಟ್ಟು 35,062.02 ಮೆ.ಟನ್ ರಷ್ಟು ರಸಗೊಬ್ಬರ ದಾಸ್ತಾನು ಇದೆ ಎಂದು ಸೋಮಸುಂದರ ತಿಳಿಸಿದ್ದಾರೆ.