ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧದಿಂದ 5-6ರಂದು ಬೀಜೋತ್ಸವ

| Published : Jul 03 2025, 11:52 PM IST

ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧದಿಂದ 5-6ರಂದು ಬೀಜೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಿನಗಳ ಬೀಜೋತ್ಸವದಲ್ಲಿ 100ಕ್ಕೂ ಹೆಚ್ಚಿನ ದೇಸಿ ಭತ್ತ, ಸಿರಿಧಾನ್ಯ, ಬೇಳೆ ಕಾಳು, ಗಡ್ಡೆ ಗೆಣಸು, ಸೊಪ್ಪು, ತರಕಾರಿಯನ್ನು ಪ್ರದರ್ಶಿಸಲಾಗುವುದು. ವಿವಿಧ ಬಗೆಯ ಶೇಂಗಾ ತಳಿಗಳ ಪ್ರದರ್ಶನವಿದೆ. ಹುರುಳಿಯ ವಿವಿಧ ತಳಿಗಳು ಮತ್ತು ಮೌಲ್ಯವರ್ಧಿತ ಪದಾರ್ಥ ಪರಿಚಯಿಸಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರು

ಸಹಜ ಸಮೃದ್ಧ ಮತ್ತು ಸಹಜ ಸೀಡ್ಸ ಜೊತೆಗೂಡಿ ಜು.5 ಮತ್ತು 6 ರಂದು ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ದೇಸಿ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ.

ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ತಂಬಾಕು, ಶುಂಠಿ ಆಹಾರ ಬೆಳೆಗಳನ್ನು ಮೂಲೆಗುಂಪು ಮಾಡಿವೆ. ಅಧಿಕ ಇಳುವರಿ ತಳಿಗಳ ದೆಸೆಯಿಂದ, ದೇಸಿ ಭತ್ತ ಮತ್ತು ಸಿರಿಧಾನ್ಯಗಳನ್ನು ಬೆಳೆಯುವವರೇ ಇಲ್ಲವಾಗಿದ್ದಾರೆ. ಹವಾಮಾನ ವೈಪರೀತ್ಯ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ದೇಸಿ ತಳಿಗಳಲ್ಲಿ ಇದ್ದು, ಕೃಷಿ ಕ್ಷೇತ್ರವನ್ನು ಕಾಡುವ ಸಮಸ್ಯೆಗಳಿಗೆ ಇವು ಪರಿಹಾರ ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ ದೇಸಿ ಬೀಜಗಳ ಮಹತ್ವವನ್ನು ರೈತರಿಗೆ ಮತ್ತು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಬೀಜೋತ್ಸವ ಆಯೋಜಿಸಿದೆ.

ಎರಡು ದಿನಗಳ ಬೀಜೋತ್ಸವದಲ್ಲಿ 100ಕ್ಕೂ ಹೆಚ್ಚಿನ ದೇಸಿ ಭತ್ತ, ಸಿರಿಧಾನ್ಯ, ಬೇಳೆ ಕಾಳು, ಗಡ್ಡೆ ಗೆಣಸು, ಸೊಪ್ಪು, ತರಕಾರಿಯನ್ನು ಪ್ರದರ್ಶಿಸಲಾಗುವುದು. ವಿವಿಧ ಬಗೆಯ ಶೇಂಗಾ ತಳಿಗಳ ಪ್ರದರ್ಶನವಿದೆ. ಹುರುಳಿಯ ವಿವಿಧ ತಳಿಗಳು ಮತ್ತು ಮೌಲ್ಯವರ್ಧಿತ ಪದಾರ್ಥ ಪರಿಚಯಿಸಲಾಗುವುದು. ಅಪರೂಪದ ದೇಸಿ ತೊಗರಿ, ಮಡಕೆ ಹೆಸರು, ಕರಿ ಮತ್ತು ಹಸಿರು ಕಡಲೆ ಕೊಳ್ಳಲು ಸಿಗಲಿವೆ. ನಿರ್ಲಕ್ಷಿತ ಹಣ್ಣುಗಳ ಜ್ಯೂಸ್ ಪ್ರದರ್ಶನ ಮತ್ತು ಮಾರಾಟವಿದೆ ಎಂದರು.

ಮುಂಗಾರಿಗೆ ಬಿತ್ತಲು ಸಿದ್ದ ಸಣ್ಣ, ರಾಜಮುಡಿ, ಸೇಲಂ ಸಣ್ಣ, ರತ್ನಚೂಡಿ, ಸಿಂಧೂರ ಮಧುಸಾಲೆ ಗಂಧ ಸಾಲೆ, ದೊಡ್ಡ ಬೈರ ನೆಲ್ಲು, ಬರ್ಮಾ ಬ್ಲಾಕ್, ಚಿನ್ನಪೊನ್ನಿ ಮೊದಲಾದ ದೇಸಿ ಭತ್ತ, ಜಗಳೂರು ರಾಗಿ ಮೊದಲಾದ ಸಿರಿಧಾನ್ಯಗಳು ಮತ್ತು ತರಕಾರಿ ಬೀಜಗಳು ಸಿಗಲಿವೆ.

5 - 12 ವರ್ಷದ ಒಳಗಿನ ಮಕ್ಕಳಿಗಾಗಿ ಭವಿಷ್ಯಕ್ಕಾಗಿ ದೇಸಿ ಬೀಜಗಳು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಮಕ್ಕಳು ತಮ್ಮ ಅರಿವಿಗೆ ದಕ್ಕಿದ ಬೀಜ ಸಂಸ್ಕೃತಿ, ಬೀಜ ಆಚರಣೆಗಳು, ಬೀಜ ಸಂರಕ್ಷಣೆ,ಸಮುದಾಯ ಬೀಜ ಬ್ಯಾಂಕ್, ಬೀಜ ರಾಜಕೀಯ ಮತ್ತು ಹೈಬ್ರಿಡ್ ತಳಿಗಳ ಅವಾಂತರವನ್ನು ಚಿತ್ರಗಳ ಮೂಲಕ ತೋರಿಸಬೇಕು. ಚಿತ್ರಗಳನ್ನು ಮನೆಯಲ್ಲೇ ಬರೆದು ಭಾನುವಾರ ಬೆಳಗ್ಗೆ 12.30ಕ್ಕೆ ಮೇಳಕ್ಕೆ ತರಬೇಕು. ಉತ್ತಮ ಚಿತ್ರಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಶನಿವಾರ ಮತ್ತು ಭಾನುವಾರ, ಮಕ್ಕಳಿಗೆ ಮತ್ತು ಹಿರಿಯರಿಗೆ ಧಾನ್ಯ ಗುರುತಿಸುವ ಸ್ಪರ್ಧೆಗಳು ನಡೆಯಲಿವೆ.

ಬೀಜಮಾತೆ ಚಿನ್ನಮ್ಮ ಮೇಳವನ್ನು ಉದ್ಘಾಟಿಸುವರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಮತ್ತು ಜೆ.ಎಸ್.ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ದೇಸಿ ಬೀಜ ಸಂರಕ್ಷಣೆ ಹಾಗೂ ಜೀವ ವೈವಿಧ್ಯಕ್ಕಾಗಿ ಶ್ರಮಿಸುತ್ತಿರುವ ದೇಶದ ವಿವಿಧ ಭಾಗಗಳ ಬೀಜ ಸಂರಕ್ಷಕರು ಹಾಗೂ ರೈತ ಗುಂಪುಗಳು ಇದರಲ್ಲಿ ಪಾಲ್ಗೊಳ್ಳಲಿವೆ.

ಸಾವಯವ ಪದಾರ್ಥಗಳು, ಕೃಷಿ ಕಲಾ ಉತ್ಪನ್ನಗಳು, ಮೌಲ್ಯವರ್ಧಿತ ಪದಾರ್ಥಗಳು, ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ. ದೇಸಿ ಆಹಾರ ಮಳಿಗೆಗಳು ಸಾಂಪ್ರದಾಯಿಕ ತಿನಿಸನ್ನು ಉಣಬಡಿಸುವರು. ಹೆಚ್ಚಿನ ವಿವರಗಳಿಗೆ ಕೋಮಲ್ ಮೊ. 98809 08608 ಸಂಪರ್ಕಿಸಬಹುದು.