ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು.

ಫೋಟೋ - 9ಎಂವೈಎಸ್‌ 50

ಕನ್ನಡಪ್ರಭ ವಾರ್ತೆ ಮೈಸೂರು

ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಟಿ. ನರಸೀಪುರ ತಾಲೂಕು ಮೂಗೂರು ಹೋಬಳಿಯ ನೀಲಸೋಗೆ ಗ್ರಾಮದಲ್ಲಿ “ಕೃಷಿ ಬೆಳೆಗಳಲ್ಲಿ ಬೀಜೋಪಚಾರದ ಮಹತ್ವ ಮತ್ತು ಸಮಗ್ರ ಕೃಷಿ ಪದ್ದತಿ ಕುರಿತು ಗುರುವಾರ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಚ್‌.ಬಿ. ಮಧುಲತಾ ಪ್ರಾಸ್ತಾವಿಕ ಮಾತನಾಡಿ, ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಪರ್ಯಾಯ ಬೆಳೆಯಾಗಿ ರಾಗಿ ಬೆಳೆಯಲ್ಲಿ ಅಲ್ಪಾವಧಿ ಅಥವಾ ಮಧ್ಯಮಾವಧಿ ಬೆಳೆಗಳನ್ನು ಬೆಳೆಯುವುದು ಸೂಕ್ತ. ಮುಸುಕಿನಜೋಳ ಹಾಗೂ ದ್ವಿಧಳ ಧಾನ್ಯಗಳನ್ನು ಬೆಳೆಯುಂತೆ ರೈತರಿಗೆ ಮಾಹಿತಿ ನೀಡಿದರು.

ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗಶಾಸ್ತ್ರಜ್ಞ ಡಾ.ವೈ.ಪಿ. ಪ್ರಸಾದ್ ಅವರು ಭತ್ತ ಹಾಗೂ ದ್ವಿಧಳ ಧಾನ್ಯಬೆಳೆಯಲ್ಲಿ ಬೀಜೋಪಚಾರದ ಮಹತ್ವ ಹಾಗೂ ವಿಧಾನಗಳ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ನೀಡಿದರು.

ಭತ್ತ ಹಾಗೂ ದ್ವಿಧಳ ಧಾನ್ಯ ಬೆಳೆಯಲ್ಲಿನ ರೋಗ ಮತ್ತು ಕೀಟಗಳ ನಿರ್ವಹಣಾ ಕ್ರಮಗಳ ಬಗ್ಗೆ ತಿಳಿಸಿದರು.

ನಿವೃತ್ತ ಕೃಷಿ ಅಧಿಕಾರಿ ಸ್ವಾಮಿಗೌಡ ಸಮಗ್ರ ಕೃಷಿ ಪದ್ದತಿ ಹಾಗೂ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು.

ಬನ್ನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿಶಾಲು ಮಾತನಾಡಿ, ರೈತರಿಗೆ ಬೆಳೆ ವಿಮೆ ಹಾಗೂ ಸೆಂಟ್ರಲ್‌ ಐ.ಡಿ. ಮಾಡಿಸಿಕೊಳ್ಳುವ ಕುರಿತು ತಿಳಿಸಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ‌ ಗ್ರಾಮದ ಮುಖಂಡರಾದ ಬಸವರಾಜು, ರೇವಣ್ಣ, ಸದಾನಂದಸ್ವಾಮಿ, ದೇವೇಂದ್ರ ಅರಸು, ಪ್ರಗತಿಪರ ರೈತರಾದ ಮುರುಳೀಧರ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂದೇಶ್ ಹಾಗೂ ಕೃಷಿ ಸಖಿಯರು ಇದ್ದರು. 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದಕೊಂಡರು.