ಸಾರಾಂಶ
ಸೀಗೆ ಹುಣ್ಣಿಮೆ ಪ್ರಯುಕ್ತ ಗುರುವಾರ ಸುಮಾರು 3 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಉತ್ತರ ಕರ್ನಾಟಕದ ಆರಾಧ್ಯ ದೇವಿ ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಪಡೆದರು.
ಕನ್ನಡಪ್ರಭ ವಾರ್ತೆ ಮುನಿರಾಬಾದ
ಸೀಗೆ ಹುಣ್ಣಿಮೆ ಪ್ರಯುಕ್ತ ಗುರುವಾರ ಸುಮಾರು 3 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಉತ್ತರ ಕರ್ನಾಟಕದ ಆರಾಧ್ಯ ದೇವಿ ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಪಡೆದರು.ಬೆಳಗ್ಗೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಭಕ್ತರು ಅಮ್ಮನ ದರ್ಶನ ಪಡೆದರು.
ಬುಧವಾರ ರಾತ್ರಿಯಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಹುಲಿಗಿ ಗ್ರಾಮಕ್ಕೆ ಆಗಮಿಸಿ ರಾತ್ರಿ ದೇವಸ್ಥಾನದ ಆವರಣದಲ್ಲಿ ಮುಕ್ಕಾಂ ಹೂಡಿದ್ದರು. ಬೆಳಗಿನ ಜಾವ 5ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ಸರತಿಯಲ್ಲಿ ನಿಂತು ಅಮ್ಮನ ದರ್ಶನ ಮಾಡಿದರು. ಬೆಳಗ್ಗೆ 8ಗಂಟೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದರು. ಮಧ್ಯಾಹ್ನ 1ರವರೆಗೆ 2 ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನವರ ದರ್ಶನ ಪಡೆದರೆ, ಸಂಜೆ 4ರವರೆಗೆ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿತು.ಟ್ರಾಫಿಕ್ ಜಾಮ್:
ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರು ಆಗಮಿಸುವ ಎರಡು ಪ್ರಮುಖ ರಸ್ತೆಗಳಾದ ಹೊಸಪೇಟೆ ಹುಲಿಗಿ ರಸ್ತೆ ಹಾಗೂ ಹಿಟ್ನಾಳ ಹುಲಿಗಿ ರಸ್ತೆಯಲ್ಲಿ ಭಾರಿ ಜನದಟ್ಟನೆಯ ಹಿನ್ನೆಲೆ ಟ್ರಾಫಿಕ ಜಾಮ್ ಉಂಟಾಗಿತ್ತು. ಇದರಿಂದ ದ್ವಿಚಕ್ರ ಹಾಗೂ ಕಾರಿನ ಸವಾರರು ಕೆಲವು ಸಮಯ ಪರದಾಡಬೇಕಾಯಿತು.ರಸ್ತೆ ಅಗಲೀಕರಣ ಯಾವಾಗ?:
ಹುಲಿಗಿ ಗ್ರಾಮದ ರಸ್ತೆಗಳು ಇಕ್ಕಾಟ್ಟಾಗಿದ್ದು ಭಾರಿ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತಾಧಿಗಳು ಈ ಇಕ್ಕಾಟ್ಟಾದ ರಸ್ತೆ ಮೂಲಕ ದೇವಸ್ಥಾನಕ್ಕೆ ತೆರಳಿ ಮತ್ತೆ ಇದೇ ರಸ್ತೆಯ ಮೂಲಕ ವಾಪಸ್ ಬರಬೇಕಾದ ಪರಿಸ್ಥಿತಿ ಬಂದಿದ್ದು, ಭಕ್ತರು ಪರದಾಡಬೇಕಾದ ಪರಿಸ್ಥಿತಿ ಬಂದಿದೆ.ನಂದಿ ವೃತ್ತದಿಂದ ದೇವಸ್ಥಾನದವರೆಗೂ ಹಾಗೂ ಹಿಟ್ನಾಳ ಕ್ರಾಸ್‌ನಿಂದ ಹುಲಿಗಿ ಗ್ರಾಮದ ನಂದಿ ವೃತ್ತದವರೆಗೆ ರಸ್ತೆಯ ಅಗಲೀಕರಣ ಅಗಬೇಕು. ಇದರಿಂದ ವಾಹನ ಸಂಚಾರ ಸುಗಮವಾಗಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗಲಿದೆ ಎಂದು ಗ್ರಾಮಸ್ಥ ಶೇಖರಪ್ಪ ಒತ್ತಾಯಿಸಿದ್ದಾರೆ.