ಇಂದು ಮೈಸೂರು ನಗರಾದ್ಯಂತ ನಿಷೇಧಾಜ್ಞೆ ಜಾರಿ

| Published : Feb 24 2025, 12:31 AM IST / Updated: Feb 24 2025, 12:32 AM IST

ಸಾರಾಂಶ

ನಗರದ ಸುರಕ್ಷತೆ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ

----ಕನ್ನಡಪ್ರಭ ವಾರ್ತೆ ಮೈಸೂರು

ಉದಯಗಿರಿ ಗಲಾಟೆ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಫೆ.24 ರಂದು ಹಮ್ಮಿಕೊಂಡಿರುವ ಮೆರವಣಿಗೆ, ಸಮಾವೇಶಕ್ಕೆ ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ನಡುವೆ ನಗರದಲ್ಲಿ ಶಾಂತಿ ಸೌಹಾ ರ್ದತೆ ಕಾಪಾಡುವ ದೃಷ್ಟಿಯಿಂದ ಫೆ.23ರ ಮಧ್ಯರಾತ್ರಿಯಿಂದ ಫೆ.24ರ ಮಧ್ಯರಾತ್ರಿಯವರೆಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಲಂ 163ಯಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಫೆ.10 ರಂದು ನಡೆಯದ ಉದಯಗಿರಿ ಘಟನೆಯ ಸಂಬಂಧ ವಿವಿಧ ಸಂಘಟನೆಗಳು ಫೆ.24 ರಂದು ನಗರದಲ್ಲಿ ಮೆರವಣಿಗೆ ಮತ್ತು ಜಾಗೃತಿ ಸಭೆಗಳನ್ನು ನಡೆಸಲು ಉದ್ದೇಶಿಸಿದ್ದು, ಇದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆಯಾಗುವುದರೊಂದಿಗೆ ನಗರದ ಸುರಕ್ಷತೆ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿಷೇಧಾಜ್ಞೆ ವೇಳೆ ಯಾವುದೇ ಮೆರವಣಿಗೆ, ಪ್ರತಿಭಟನೆ, ವಾಹನಗಳ ರ್ಯಾಲಿಯೊಂದಿಗೆ ಬಹಿರಂಗ ಸಭೆಗೆ ಅವಕಾಶ ಇರುವುದಿಲ್ಲ. ಪರ ಮತ್ತು ವಿರೋಧ ಘೋಷಣೆ ಕೂಗುವುದಿಲ್ಲ. 5 ಹೆಚ್ಚು ಮಂದಿ ಜನರು ಒಂದೆಡೆ ಸೇರುವಂತಿಲ್ಲ, ಕರಪತ್ರಗಳನ್ನು ಹಂಚುವಂತಿಲ್ಲ. ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ನಿಷೇಧಾಜ್ಞೆ ಆದೇಶವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಉದಯಗಿರಿ ಘಟನೆ ಹಿನ್ನಲೆಯಲ್ಲಿ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ, ದಲಿತ ಮಹಾಸಭಾ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ನಗರದಲ್ಲಿ ಮೆರವಣಿಗೆ ಮತ್ತು ಸಮಾವೇಶ ನಡೆಸಲು ಉದ್ದೇಶಿಸಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆ ಇರುವುದರಿಂದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

-- ಬಾಕ್ಸ್‌--

-- ಮೆರವಣಿಗೆ, ಸಭೆಗೆ ನಿರ್ಬಂಧ--

ಫೆ.24 ರಂದು ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯಿಂದ ಗನ್ ಗೌಸ್ ವೃತ್ತದಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಬೃಹತ್ ಜಾಗೃತಿ ರ್ಯಾಲಿ ಮತ್ತು ಸಭೆಯನ್ನು ನಡೆಸಲು ಉದ್ದೇಶಿಸಿತ್ತು. ಜೊತೆಗೆ ದಲಿತಾ ಮಹಾಸಭಾ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಗನ್ ಹೌಸ್ ವೃತ್ತದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಮೌನ ಮೆರವಣಿಗೆ ನಡೆಸಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿತ್ತು. ಈ ಮೂರು ಸಂಘಟನೆಗಳು ಒಂದೇ ದಿನ ಒಂದೇ ಸಮಯ ಮತ್ತು ಒಂದೇ ಮಾರ್ಗದಲ್ಲಿ ಜಾಥಾ ಮತ್ತು ಸಮಾವೇಶವನ್ನು ಪ್ರತಿಷ್ಠೆಗಾಗಿ ಹಮ್ಮಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠೆಯ ರೂಪದಲ್ಲಿ ಪರ ವಿರೋಧ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಇದರಿಂದ ಕಾನೂನು ಮತ್ತು ಸುವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ನಗರ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.