ಸಾರಾಂಶ
- ಸೀಮಂತ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು ಬೀಳ್ಕೊಡುಗೆ ಕಾರ್ಯಕ್ರಮ । ಯಾದಗಿರಿ ಜಿ.ಪಂ. ಸಿಇಓ ಆಗಿದ್ದ ಗರೀಮಾ ಪನ್ವಾರ್‌ಗೆ ಆತ್ಮೀಯ ಸನ್ಮಾನ
---------ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾ ಪಂಚಾಯಿತಿ ಸಿಇಒ ಗರೀಮಾ ಪನ್ವಾರ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭ ತವರು ಮನೆಯಲ್ಲಿ ನಡೆದಂತೆ, ಭಾವುಕತೆಯ ಸೀಮಂತ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಒಂದೂವರೆ ವರ್ಷ ಕಾಲ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ಗರೀಮಾ ಪನ್ವಾರ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಜಿಟಲ್ ಹೆಲ್ತ್ (ಇ-ಹೆಲ್ತ್) ವಿಭಾಗದ ನಿರ್ದೇಶಕರನ್ನಾಗಿ ಸರ್ಕಾರ ವರ್ಗಾವಣೆ ಮಾಡಿದೆ.
ನೂತನ ಸಿಇಓ ಆಗಿ ಬೀದರ್ ಹಿರಿಯ ಸಹಾಯಕ ಆಯುಕ್ತರಾಗಿದ್ದ ಐಎಎಸ್ ಲವೀಶ್ ಓರ್ಡಿಯಾ ಅವರನ್ನು ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಓ ಎಂದು ಸರ್ಕಾರ ವರ್ಗಾಯಿಸಿತ್ತು. ಗುರುವಾರವಷ್ಟೇ, ಲವೀಶ್ ಓರ್ಡಿಯಾ ಅವರು ಅಧಿಕಾರ ಸ್ವೀಕರಿಸಿದ್ದರು.ಗರೀಮಾ ಪನ್ವಾರ್ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಸಿಇಓ ಅವರಿಗೆ ಸ್ವಾಗತ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳು ಮನದಾಳ ಹಂಚಿಕೊಂಡರು.
ಗರೀಮಾ ಪನ್ವಾರ್ ಅವರು ಗರ್ಭಿಣಿ ಅನ್ನೋದನ್ನು ಅರಿತಿದ್ದ ಸಮಾರಂಭದಲ್ಲಿ ನೆರೆದಿದ್ದ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಭಿಮಾನಿ ಬಳಗ ಅದೇ ಕ್ಷಣದಲ್ಲಿ ತವರು ಮನೆಯಂತೆ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮವನ್ನೂ ನಡೆಸಿಯೇ ಬಿಟ್ಟರು. ಇಂತಹ ಸಮಾರಂಭ ಅಲ್ಲಿದ್ದವರಿಗೆ ಭಾವುಕತೆಯಾವರಿಸಿತ್ತು. ಇದಕ್ಕೆಂದೇ ಎಲ್ಲ ಪೂರ್ವಸಿದ್ಧತೆಗಳನ್ನು ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ್ದರು.ಮೇಡಂ ಅವರಿಗೆ ಸತ್ಕಾರ ಮಾಡುವ ಸಲುವಾಗಿ ವೇದಿಕೆ ಏರಿದ್ದ ಅನೇಕ ಮಹಿಳೆಯರ ತಂಡ, "ನಮ್ಮ ಕಡೆ ಗರ್ಭಿಣಿಯರಿಗೆ ಸೀಮಂತ ಸಂಪ್ರದಾಯವಿದ್ದು, ಇದನ್ನು ತಾವು ಸ್ವೀಕರಿಸಬೇಕು ಎಂದಾಗ ಅವರ ಅಭಿಮಾನ-ಪ್ರೀತಿಗೆ ಸೋತ ಗರೀಮಾ ಪನ್ವಾರ್ ತಲೆಯಾಡಿಸಿದರು. ನಂತರ ನಡೆದಿದ್ದು ಪಕ್ಕಾ ಸಂಪ್ರದಾಯದ ಸೀಮಂತ ಕಾರ್ಯಕ್ರಮ.
ವೇದಿಕೆ ಕುರ್ಚಿ ಮೇಲೆ ಅವರನ್ನು ಕೂಡಿಸಿ ಸಂಪ್ರದಾಯದಂತೆ ಸೀರೆ- ಹಸಿರು ಬಳೆ ತೊಡಿಸಿ ದಂಡಿಹಾರ ತಲೆಗೆ ಕಟ್ಟಿ, ಅರಶಿನ- ಕುಂಕುಮ ಹಚ್ಚಿ, ಕೊರಳಿಗೆ ಬೃಹತ್ ಹೂವಿನ ಹಾರ ಹಾಕಿ ಸೀಮಂತ ಕಾರ್ಯಕ್ರಮದ ವಾತಾವರಣ ಮೂಡಿಸಿದರು. 11 ನಮೂನೆಯ ಹಣ್ಣುಗಳು, ಸಿಹಿ ಪದಾರ್ಥಗಳು, ಎಲೆ -ಅಡಿಕೆ ಉಡಿ ಅಕ್ಕಿ ಅವರ ನೀಡುವ ಮೂಲಕ ತಾಯ್ತನದ ಸೊಬಗು ಮೂಡಿಸಿದರು. ಅಷ್ಟೇ ಅಲ್ಲದೆ, ಇದಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಿ ಒಂದು ಸಾರ್ಥಕ ಗೌರವವನ್ನು ಯಾದಗಿರಿ ಜಿಲ್ಲೆಯ ಮಹಿಳಾ ಪಿಡಿಓಗಳು ತಮ್ಮ ನೆಚ್ಚಿನ ಹಿರಿಯ ಅಧಿಕಾರಿಗೆ ನೀಡುವ ಮೂಲಕ ಪನ್ವಾರ್ ಅವರಿಗೆ ತವರು ಮನೆ ನೆನಪಿಸಿದರು.ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸಂಗೀತಾ, ಜಯಶ್ರೀ, ಸಹನಾ ಬೇಗಂ, ವಿಜಯಲಕ್ಷ್ಮೀ, ಅಕ್ಕ ನಾಗಮ್ಮ, ಶೀಲಾ, ವಿಜಯಲಕ್ಷ್ಮಿ ,ಅನುರಾಧ, ಶಾಂತ, ಶಾರದಾ, ಶೋಭಾ, ಲಕ್ಷ್ಮಿಬಾಯಿ ಮುಂತಾದವರು ಇದ್ದರು.
================ಬಾಕ್ಸ್===========- ಜಿ. ಪಂ. ಸಿಇಓ ಆಗಿ ಲವೀಶ್ ಓರ್ಡಿಯಾ ಅಧಿಕಾರ ಸ್ವೀಕಾರ
ಯಾದಗಿರಿ ಜಿ.ಪಂ. ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಅವರು ಅಧಿಕಾರ ವಹಿಸಿಕೊಂಡಿದ್ದು, ಅವರು 2020 ರ ಐಎಎಸ್ ಬ್ಯಾಚಿನವರಾಗಿದ್ದಾರೆ. ಮುಂಬಯಿ ಐಐಟಿಯಿಂದ ಬಿ-ಟೆಕ್ ಪೂರ್ಣಗೊಳಿಸಿದ್ದು, ರಾಜಸ್ಥಾನದ ಉದಯಪುರದವರು. ಇವರು ಕೇಂದ್ರ ಸರ್ಕಾರದ ಗ್ರಾಹಕರ ವ್ಯವಹಾರಗಳ ಸಚಿವಾಲಯದಲ್ಲಿ ಹಾಗೂ ಬೀದರ್ ಜಿಲ್ಲೆಯ ಹಿರಿಯ ಸಹಾಯಕ ಆಯುಕ್ತರಾಗಿ 2 ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇದೀಗ ಯಾದಗಿರಿ ಜಿಲ್ಲಾ ಪಂಚಾಯಿತಿ ನೂತನ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.-----
30ವೈಡಿಆರ್14 : ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸಿದ್ದ ಗರೀಮಾ ಪನ್ವಾರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಪ್ರದಾಯದಂತೆ ಸೀಮಂತ ನೆರವೇರಿಸಿದ ಮಹಿಳೆಯರ ದಂಡು.-----
30ವೈಡಿಆರ್15 : ಗರೀಮಾ ಪನ್ವಾರ್,----
30ವೈಡಿಆರ್16 : ನೂತನ ಸಿಇಓ ಲವೀಶ್ ಓರ್ಡಿಯಾ.