ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ಆಗಸ್ಟ್ 30ರಂದು ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ದಿನದ ಪ್ರಯುಕ್ತ ಸೀರತ್ ಅಭಿಮಾನವನ್ನು ನಗರದ ಕಾಟ್ವೆ ಭವನದಲ್ಲಿ ಸಂಜೆ 6-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಅಬ್ದುಲ್ ಖಯ್ಯೂಂ ತಿಳಿಸಿದ್ದಾರೆ.

- ಪ್ರವಾದಿ ಮುಹಮ್ಮದ್ (ಸ) ಜನ್ಮದಿನ ಅಂಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಆಯೋಜನೆ - - - ಕನ್ನಡಪ್ರಭ ವಾರ್ತೆ ಹರಿಹರ

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ಆಗಸ್ಟ್ 30ರಂದು ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ದಿನದ ಪ್ರಯುಕ್ತ ಸೀರತ್ ಅಭಿಮಾನವನ್ನು ನಗರದ ಕಾಟ್ವೆ ಭವನದಲ್ಲಿ ಸಂಜೆ 6-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಅಬ್ದುಲ್ ಖಯ್ಯೂಂ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೀರತ್ ಅಭಿಮಾನ ನಡೆಯಲಿದೆ. ಅದರಂತೆ ನಗರದಲ್ಲಿ ''''ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)'''' ಶೀರ್ಷಿಕೆಯಡಿ ಅಭಿಯಾನ ನಡೆಸಲಾಗುವುದು. ಪ್ರವಾದಿ ಮುಹಮ್ಮದ್ ಅವರು ಜಗತ್ತಿನಲ್ಲಿ ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆ ಮೇಲೆ ಸ್ಥಾಪಿತವಾಗಿದೆ ಎಂದರು.

ಅಭಿಯಾನದ ಪ್ರಯುಕ್ತ, ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ಅವರು ಬರೆದ ''''''''ಮಾನವ ಮನಸ್ಸಿನ ಕೃಷಿಕ–ಮನದೊಡೆಯ ಪ್ರವಾದಿ ಮುಹಮ್ಮದ್(ಸ)'''''''' ಹಾಗೂ ವಾರ್ತಾ ಭಾರತಿ ದಿನಪತ್ರಿಕೆ ಪ್ರಧಾನ ಸಂಪಾದಕ ಅಬ್ದುಸಲಾಂ ಪುತ್ತಿಗೆ ಅವರು ಬರೆದ ''''''''ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)'''''''' ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಗುವುದು. ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ವೈಯಕ್ತಿಕ ಭೇಟಿ, ''''''''ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)'''''''' ಎಂಬ ಶೀರ್ಷಿಕೆಯಡಿ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ, ಸೀರತ್ ಎಕ್ಸಿಬಿಶನ್, ಸಮಾಜ ಸೇವಾ ಚಟುವಟಿಕೆಗಳು, ಸೌಹಾರ್ದ ಸಂದೇಶ ರ್ಯಾಲಿಗಳು ಹೀಗೆ ದೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮಿಗಳು ಹಾಗೂ ಸಂತ ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲ ಫಾದರ್ ಎಸ್.ಜೆ. ಜೀವನ್ ವಹಿಸಲಿದ್ದಾರೆ. ಉಪನ್ಯಾಸ ಹಾಗೂ ಆಶೀರ್ವಚನ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮಾಡಲಿದ್ದಾರೆ. ಶಾಸಕ ಬಿ.ಪಿ. ಹರೀಶ್ ಉದ್ಘಾಟನೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ವಹಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ದಾವಣಗೆರೆ ಹಿರಿಯ ಸಾಹಿತಿ ದಾದಾಪೀರ್ ನವಲೇಹಾಳ್, ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎಸ್.ರಾಮಪ್ಪ, ಎಚ್.ಎಸ್. ಶಿವಶಂಕರ್, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಡಾ.ಗುಲಾಂ ನಬಿ, ವೈ.ಜಿ. ಅಬ್ದುಲ್ ಖಯ್ಯೂಂ, ರಾಬಿತಾ ಎ. ಮಿಲ್ಲಾತ್ ಸಮಿತಿ ಅಧ್ಯಕ್ಷ ಸೈಯದ್ ಮುನಿರ್ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನಗರಸಭೆ ಸದಸ್ಯ ಹಬೀಬ್ ಉಲ್ಲಾ, ಇಕ್ರಾಶಾಲೆಯ ಅಬ್ದುಲ್ ರೆಹಮಾನ್, ಮಾಜಿ ದೂಡಾ ಸದಸ್ಯ ಎಚ್.ನಿಜಗುಣ, ಸೈಯದ್ ಮುನಿರ್ ಸಾಬ್, ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್ ಸಾಬ್, ಎಂ.ಬಿ. ಅಣ್ಣಪ್ಪ, ಎ.ರಿಯಾಜ್ ಆಹ್ಮದ್, ಶಫಿಸಾಬ್, ಉಸ್ಮಾನ್ ಸಾಬ್, ಅಂಟೋನಿ, ಇಮ್ಮುರಾಜ್, ಶಂಕರ್ ಮೂರ್ತಿ, ಎಂಜಿನಿಯರ್ ರೆಹಮಾನ್ ಇತರರು ಇದ್ದರು.

- - -

(ಬಾಕ್ಸ್‌)

* ಅಪ್ಪಟ ಮಾನವೀಯ ಕ್ರಾಂತಿಕಾರ ಪ್ರವಾದಿ ಮುಹಮ್ಮದ್

ಮುಹಮ್ಮದರು ಜನರ ಮನಸ್ಸನ್ನು ಸಂಸ್ಕರಿಸಿ, ಅವರ ನೈತಿಕತೆ ಮತ್ತು ಚಾರಿತ್ರ‍್ಯವನ್ನು ಶುದ್ಧಿಕರಿಸುವ ಮೂಲಕ ವ್ಯಕ್ತಿಗಳನ್ನು, ಸಮಾಜವನ್ನು ಪರಿವರ್ತಿಸಿದರು. ಅವರ ಕ್ರಾಂತಿಯು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು. ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ, ಆಡಳಿತ ಹೀಗೆ ಎಲ್ಲ ಕ್ಷೇತ್ರಗಳನ್ನು ಬೆಳಗಿಸಿದ ಕ್ರಾಂತಿಯಾಗಿತ್ತು. ಸುಭಿಕ್ಷೆ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು. ಆದ್ದರಿಂದ ಪ್ರವಾದಿ ಮುಹಮ್ಮದ್ ಅವರು ಈ ಸಂದೇಶಗಳನ್ನು ಕನ್ನಡ ಜನತೆಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಪರಸ್ಪರ ಬಾಂಧವ್ಯಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶ ಎಂದು ಅಧ್ಯಕ್ಷ ಅಬ್ದುಲ್ ಖಯ್ಯೂಂ ಹೇಳಿದರು.

- - -

-26ಎಚ್.ಆರ್.ಆರ್2 :

ಹರಿಹರ ನಗರದ ಪತ್ರಿಕಾ ಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಅಬ್ದುಲ್ ಖಯ್ಯೂಂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.