ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ -೩ ಯಶಸ್ವಿಯಾಗಿ ಇಳಿದ ದಿನದ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ ೨೩ ರಂದು ದೇಶಾದ್ಯಂತ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಆಸಕ್ತಿ ಮೂಡಿಸುವುದಾಗಿದೆ ಎಂದು ಯು. ಆರ್. ರಾವ್ ಉಪಗ್ರಹ ಕೇಂದ್ರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಿರಿಯ ವಿಜ್ಞಾನಿ ಡಾ.ವೆಂಕಟೇಶ್ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಗ್ರಾವಿಟಿ ಸೈನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನ-೨೦೨೫ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಸ್ರೋ ವಿವಿಧ ಶಾಲೆಗಳಲ್ಲಿ ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮುಂದಿನ ತಲೆಮಾರಿನ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡುತ್ತಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನ ಬಾಹ್ಯಾಕಾಶ ಅನ್ವೆಷಣೆಯಲ್ಲಿ ಭಾರತದ ಸಾಧನೆಗಳನ್ನು ಸಂಭ್ರಮಿಸಿ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ದೇಶಕ್ಕೆ ತೋರಿಸುತ್ತದೆ. ಅದರೊಡನೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಗುರಿಯನ್ನೂ ಹೊಂದಲಾಗಿದೆ. ಪ್ರಸ್ತುತ ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎನ್. ಮಹದೇವಸ್ವಾಮಿ ಮಾತನಾಡಿ, ಭಾರತದ ವಿಜ್ಞಾನ ಮತ್ತು ಬಾಹ್ಯಾಕಾಶದ ಸಾಧಣೆಯನ್ನು ಜಗತ್ತು ಅಚ್ಚರಿಯಿಂದ ನೋಡುತ್ತಿದೆ. ಆಪರೇಷನ್ ಸಿಂದೂರದ ಯಶಸ್ಸು ಭಾರತದ ರಕ್ಷಣಾ ಕೇತ್ರದ ಕಡೆಗೆ ಜಗತ್ತು ನೋಡುವಂತೆ ಮಾಡಿದೆ ಎಂದರು.
ಬಾಹ್ಯಾಕಾಶ ಯೋಜನೆಗಳು ನಮ್ಮ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತಿವೆ. ವಿಜ್ಞಾನ ಎಂಬುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಚಂದ್ರಯಾನ ೩ ಯೋಜನೆ ೨೦೨೩ರಲ್ಲಿ ಯಶಸ್ವಿ ಲ್ಯಾಂಡಿಂಗ್ ನಡೆಸಿದ್ದು, ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಗೌರವವನ್ನು ಭಾರತಕ್ಕೆ ಒದಗಿಸಿತು, ಉದ್ಯೋಗ ಆಧಾರಿತ ಶಿಕ್ಷಣವಾಗದೇ ಜ್ಞಾನ ಆಧಾರಿತ ಶಿಕ್ಷಣವಾಗಬೇಕಿದೆ ಎಂದರು.ರಾಷ್ಟ್ರ ನಿರ್ಮಾಣದಲ್ಲಿ ಯುವ ಸಮೂಹದ ಪಾತ್ರ ಅತ್ಯಂತ ಮಹತ್ವವಾಗಿದೆ. ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಪಟ್ಟರಂತೆ ಬೆಂಗಳೂರು ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ಸಂಶೋಧನಾ ಕೇಂದ್ರಗಳಿದ್ದು ಹಲವಾರು ಆವಕಾಶಗಳಿದ್ದು, ಕನಸ್ಸನ್ನು ಕಟ್ಟಿಕೊಂಡು ಅದನ್ನು ನನಸು ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಬಾರಿ ಬಾಹ್ಯಾಕಾಶ ದಿನವನ್ನು ಭೂತಕಾಲ ಮತ್ತು ಭವಿದ ಸೇತುವೆ ಸಾಂಪ್ರದಾಯಿಕ ಖಗೋಳಶಾಸ್ತ್ರವನ್ನು ಗೌರವಿಸುತ್ತಾ, ಆಧುನಿಕ ಬಾಹ್ಯಾಕಾಶ ಸಾಧನೆಗಳ ಪ್ರದರ್ಶನ’ ಎಂಬ ಘೋಷ ವಾಕ್ಯದಡಿಯಲ್ಲಿ ಆಚರಿಸಲಾಗುತ್ತಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾವಿಟಿ ಸೈನ್ಸ್ ಫೌಂಡೇಶನ್, ಸ್ಧಾಪಕ ಕಾರ್ಯದರ್ಶಿ ಅಭಿಷೇಕ್ ಎ. ಎಸ್. ವಿಕ್ರಮ್ ಸಾರಾಬಾಯಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಭಾರತದ ವಿಜ್ಞಾನ ಮತ್ತು ಬಾಹ್ಯಾಕಾಶ ಯೋಜನೆಗಳು ನಡೆಯುತ್ತಿದ್ದು ಇದನ್ನು ಪೇರೆಪಿಸುವ ಜೊತೆಗೆ ಮುಂದಿನ ಯುವ ವಿಜ್ಞಾನಿಗಳನ್ನು ಹುಟ್ಟು ಹಾಕುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದರು.
ರಾಷ್ಟ್ರೀಯ ಬಾಹ್ಯಾಕಾಶ ದಿನ ೨೦೨೫ ಕೇವಲ ಚಂದ್ರಯಾನ ೩ರ ಯಶಸ್ಸಿನ ಸಂಭ್ರಮಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಇಸ್ರೋ ಮತ್ತು ಅದರ ಸಿಬ್ಬಂದಿಗಳು ಸಾಗಿಬಂದ ಹಾದಿ ಮತ್ತು ಪ್ರೇರಣೆ ಮತ್ತು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದರು.ಪಿಡಬ್ಲೂಡಿ ಕಾರ್ಯಪಾಲಕ ಇಂಜಿನಿಯರ್ ಕಿರಣ್, ಐಕ್ಯೂಎಸಿ ಸಂಚಾಲಕ ಎಂ. ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕರಾದ ಎಂ. ಸೌಮ್ಯ ಸ್ವಾಗತಿಸಿ, ವಿದ್ಯಾರ್ಥಿನಿ ಸಿಂಚನ ನಿರೂಪಿಸಿದರು, ತ್ರಿವೇಣಿ ವಂದಿಸಿದರು.