ಸಾರಾಂಶ
ಪರವಾನಗಿ ಇಲ್ಲದೆ ಕೀಟನಾಶಕ ದಾಸ್ತಾನು ಜಪ್ತಿ
ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯ ಗುಬ್ಬಿ ನಿಟ್ಟೂರು ಹೋಬಳಿ ಮೂಗನಾಯಕನ ಕೋಟೆ ಗ್ರಾಮ ಅಶೋಕ ರಸ್ತೆಯಲ್ಲಿರುವ ವಾಸವಿ ಹಾರ್ಡ್ ವೇರ್ಸ್
ಮತ್ತು ಎಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ದಾಖಲಾತಿ ನಿರ್ವಹಣೆ ಹಾಗೂ ಪರವಾನಗಿ ಇಲ್ಲದೆ ಅನಧಿಕೃತವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಕೀಟನಾಶಕವನ್ನು ಆಗಸ್ಟ್ 1ರಂದು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ. ಅನಾಮಧೇಯ ದೂರಿನ ಮೇರೆಗೆ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಅನಧಿಕೃತವಾಗಿ ದಾಸ್ತಾನು ಮಾಡಿ ವಿವಿಧ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ಕೀಟನಾಶಕಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಲಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳ ತಂಡ ವಾಸವಿ ಹಾರ್ಡ್ ವೇರ್ಸ್ಮತ್ತು ಎಲೆಕ್ಟ್ರಿಕಲ್ಸ್ ಮಳಿಗೆಯನ್ನು ಪರಿಶೀಲಿಸಿದಾಗ ಪರಿಶೀಲನೆಗೆ ಆಸಹಕಾರ ನೀಡಿದ್ದರಿಂದ ಮಳಿಗೆಯನ್ನು ಲಾಕ್ ಮಾಡಿ ನೋಟೀಸ್ ಜಾರಿ ಮಾಡಲಾಗಿತ್ತು. ಮರುದಿನ ಮಾಲೀಕರ ಸಮ್ಮುಖದಲ್ಲಿ ಪರಿಶೀಲಿಸಿದಾಗ ಖರೀದಿ ಇನ್ ವಾಯ್ಸ್, ದಾಸ್ತಾನು ವಹಿ, ನಗದು ಬಿಲ್ಲುಗಳಿಲ್ಲದೆ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಅಂದಾಜು 22,500 ರೂ. ಮೌಲ್ಯದ 127.14 ಕೆ.ಜಿ. ಕೀಟನಾಶಕಗಳನ್ನು ಜಪ್ತಿ ಮಾಡಲಾಗಿದೆ. ಕೀಟನಾಶಕಗಳ ಮಾದರಿಗಳನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ. ಮಳಿಗೆಯಲ್ಲಿ ಅವಧಿ ಮೀರಿದ ಕೀಟನಾಶಕಗಳನ್ನು ಸಹ ದಾಸ್ತಾನು ಮಾಡಲಾಗಿತ್ತು.
ಇದೇ ಗ್ರಾಮದಲ್ಲಿ ಕಳೆದ ಸಾಲಿನಲ್ಲಿ ಒಂದು ಮಳಿಗೆಯಲ್ಲಿ ಅನಧಿಕೃತ ಕೀಟನಾಶಕ ಮಾರಾಟ ಮಾಡುತ್ತಿದ್ದರಿಂದ ಜಪ್ತಿ ಮಾಡಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದ್ದು, ಗ್ರಾಮದಲ್ಲಿ ಇದು ೨ನೇ ಪ್ರಕರಣವಾಗಿದೆ. ಸದರಿ ಮಾರಾಟಗಾರರು ಕೀಟನಾಶಕ ಕಾಯ್ದೆ 1968 & ನಿಯಮಗಳು 1991ನ್ನು ಉಲ್ಲಂಘನೆ ಮಾಡಿರುವುದರಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ.ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಅಶ್ವತ್ಥನಾರಾಯಣ.ವೈ, ಕೃಷಿ ಅಧಿಕಾರಿ(ಪ್ರಭಾರ) ಮಹದೇವಯ್ಯ ಎಂ.ಆರ್., ನಿಟ್ಟೂರು ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಆಶ್ವಿನಿ ಪಾಲ್ಗೊಂಡಿದ್ದರು.
ಫೋಟೋ: ಅಕ್ರಮವಾಗಿ ಕೀಟ ನಾಶಕ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ ಕೃಷಿ ಇಲಾಖೆ ಅಧಿಕಾರಿಗಳು ವಸ್ತುಗಳನ್ನು ವಶಕ್ಕೆ ಪಡೆದರು.