ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡಿ

| Published : May 21 2024, 12:34 AM IST

ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ನೈಋತ್ಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಗಳಾದ ಡಾ. ಅರುಣ್‌, ಭಾಸ್ಕರ್‌ ಶೆಟ್ಟಿ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಾದರೆ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡಿ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಗಳಾದ ಡಾ. ಅರುಣ್‌ ಹೊಸಕೊಪ್ಪ ಹಾಗೂ ಭಾಸ್ಕರ್‌ ಶೆಟ್ಟಿ ಶಿಕ್ಷಕ ಮತದಾರರಿಗೆ ಮನವಿ ಮಾಡಿದ್ದಾರೆ.

ಸೋಮವಾರ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತವನ್ನು ಯಾರಿಗಾದರೂ ಕೊಡಿ, ಆದರೆ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರನ್ನೇ ಆಯ್ಕೆ ಮಾಡಿ ಎಂದರು.

ಮತದಾನ ಮಾಡಲು ಶಿಕ್ಷಕರಾಗಿ 3 ವರ್ಷ ಸೇವೆ ಸಲ್ಲಿಸಿರಬೇಕು, ಹಾಗೆಯೇ ಸ್ಪರ್ಧೆ ಮಾಡುವವರು ಕನಿಷ್ಠ 3 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರುವುದು ಬೇಡವೇ. ಅದ್ದರಿಂದ ಶಿಕ್ಷಕರನ್ನೇ ಆಯ್ಕೆ ಮಾಡಬೇಕು ಎಂದು ಡಾ. ಅರುಣ್ ಹೊಸಕೊಪ್ಪ ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಶಿಕ್ಷಕರ ಕಾರ್ಯಕ್ರಮಗಳಲ್ಲಿ ಊಟ, ಪಾರ್ಟಿ ಮಾಡಿಸುವುದು, ಗಿಫ್ಟ್‌ ಕೊಡುವುದು, ಹಣ ಹಂಚುವಂತಹ ಕೆಲಸ ಆರಂಭವಾಗಿದೆ. ಶಿಕ್ಷಕರಲ್ಲದ ಅಭ್ಯರ್ಥಿಗಳನ್ನು ತಿರಸ್ಕರಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಗಣಿ ಉದ್ಯಮಿಗಳು, ಭ್ರಷ್ಟಚಾರದಿಂದ ಹಣ ಸಂಪಾದನೆ ಮಾಡಿದವರು, ರಾಜಕಾರಣಿಗಳು, ಹಣ ಹಂಚಿ ಗೆದ್ದು ಹೋಗುತ್ತಾರೆ ಎಂದರು.

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಳೆದ 2012 ಹಾಗೂ 2018ರಲ್ಲಿ ಸ್ಪರ್ಧಿಸಿ ಅತಿ ಹೆಚ್ಚು ಮತ ಪಡೆದರೂ ಗೆಲ್ಲುವಲ್ಲಿ ವಿಫಲನಾದೆ. ಈಗಾಗಲೇ ಸುಮಾರು 15 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಭೇಟಿ ಮಾಡಿದ್ದೇನೆ ಎಂದ ಅವರು, ಈ ಚುನಾವಣೆಯಲ್ಲಿ ಪಕ್ಷ ಇರುವುದಿಲ್ಲ, ಶಿಕ್ಷಕನ್ನಾಗಿ ಅನುಭವ ಇರುವ ನಮಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಸ್ವತಂತ್ರ ಅಭ್ಯರ್ಥಿ ಭಾಸ್ಕರ್ ಶೆಟ್ಟಿ ಮಾತನಾಡಿ, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಬರಬೇಕು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗೊಂದಲ ಹಾಗೂ ಒತ್ತಡಕ್ಕೆ ಸಿಲುಕಿಸುವ ಸರ್ಕಾರದ ಹಲವು ನಿರ್ಧಾರಗಳ ವಿಚಾರದಲ್ಲಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಗೂ ಪೋಷಕರ ಪರ ನಿಲ್ಲುತ್ತೇನೆ ಎಂದರು.

ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ನುರಿತ ಶಿಕ್ಷಕರೇ ನಮ್ಮ ಶಿಕ್ಷಕರ ಎಂಎಲ್‌ಸಿ ಪ್ರತಿನಿಧಿಗಳಾಗಿ ಆಯ್ಕೆ ಆಗಬೇಕು. ಪ್ರತಿ ವರ್ಷ ಮೇ ಅಂತ್ಯದೊಳಗೆ ಶಾಲೆಗಳಿಗೆ ಪಠ್ಯ ಪುಸ್ತಕಗಳು ಸಿಗುವ ವ್ಯವಸ್ಥೆ ಆಗಬೇಕು, ಅಲ್ಲದೆ ಶಿಕ್ಷಕರು ವೇತನ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆ ನಿವಾರಣೆ ಮಾಡಬೇಕು ಎಂದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರಿಂದ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.