ಆಯ್ಕೆಗೊಂಡ ಪಿಎಸ್‌ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಗೆ ಕಾಯುವ ಶಿಕ್ಷೆ!

| Published : Apr 23 2025, 12:34 AM IST

ಆಯ್ಕೆಗೊಂಡ ಪಿಎಸ್‌ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಗೆ ಕಾಯುವ ಶಿಕ್ಷೆ!
Share this Article
  • FB
  • TW
  • Linkdin
  • Email

ಸಾರಾಂಶ

402 ಮಂದಿ ಪಿಎಸ್‌ಐ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿ ಬೇರೆ ಯಾರೋ ಮಾಡಿದ ಯಾವುದೋ ತಪ್ಪಿಗೆ ನ್ಯಾಯಯುತವಾಗಿ ನೇರ ಆಯ್ಕೆಯಾಗಿರುವ ಈ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡದೆ ವಿಳಂಬಿಸಲಾಗುತ್ತಿದೆ. ಇದರಿಂದಾಗಿ ಆಯ್ಕೆಯಾದ ಈ ಅಭ್ಯರ್ಥಿಗಳು ನೇಮಕಾತಿಗೆ ಇನ್ನು ಮತ್ತೆ ಕಾಯುವ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರು

ಪೊಲೀಸ್‌ ಇಲಾಖೆಯಲ್ಲಿ ಸಿವಿಲ್‌ ಪೊಲೀಸ್‌ ಹುದ್ದೆಗೆ ಪಿಎಸ್‌ಐ ಪರೀಕ್ಷೆಯಲ್ಲಿ ಆಯ್ಕೆಗೊಂಡು ತಿಂಗಳುಗಳೇ ಕಳೆದರೂ ಇನ್ನೂ ಅಭ್ಯರ್ಥಿಗಳಿಗೆ ಆದೇಶ ಪ್ರತಿ(ಆರ್ಡರ್‌ ಕಾಪಿ) ತಲುಪಿಲ್ಲ. ಬಹಳ ವರ್ಷಗಳ ವರೆಗೆ ಕಾದುಕುಳಿತು ಪರೀಕ್ಷೆ ಬರೆದು ಪಾಸ್‌ ಆಗಿ, ಸಂದರ್ಶನ ಎದುರಿಸಿ ಆಯ್ಕೆಯಾದ 402 ಮಂದಿ ಅಭ್ಯರ್ಥಿಗಳು ಈಗ ನೇಮಕಾತಿ ಆದೇಶ ಪ್ರತಿಗಾಗಿ ಮತ್ತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ 402 ಪಿಎಸ್‌ಐ ಹುದ್ದೆ ಭರ್ತಿಗೆ 2021 ಏಪ್ರಿಲ್‌ 1ರಂದು ಅಧಿಸೂಚನೆ ಹೊರಡಿಸಲಾಗಿತ್ತು. 2024 ಅಕ್ಟೋಬರ್‌ 3 ರಂದು ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆ ನಡೆದಿತ್ತು. ಅದೇ ಡಿಸೆಂಬರ್‌ 26ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಬಳಿಕ ದಾಖಲಾತಿ ಪರಿಶೀಲನೆ ಮುಕ್ತಾಯಗೊಂಡು ಮೂರು ತಿಂಗಳೇ ಕಳೆದಿದೆ. ಇಲ್ಲಿವರೆಗೆ ಯಾವೊಬ್ಬ ಅಭ್ಯರ್ಥಿಗೂ ಆದೇಶ ಪ್ರತಿ ಬಂದಿಲ್ಲ. ಪೊಲೀಸ್‌ ಇಲಾಖೆಯ ನೇಮಕಾತಿ ವಿಭಾಗ ವೃಥಾ ವಿಳಂಬ ಧೋರಣೆ ಹಾಗೂ ಸತಾಯಿಸುವ ಕೆಲಸ ನಡೆಸುತ್ತಿದೆ ಎಂದು ಸಂತ್ರಸ್ತ ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ. ಇನ್ನಾದರೂ ಕೂಡಲೇ ಆದೇಶ ಪ್ರತಿ ನೀಡಿ, ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ!

ಪೊಲೀಸ್‌ ಇಲಾಖೆ ನೇಮಕಾತಿ ವಿಚಾರದಲ್ಲಿ ಯಾರೋ ಕೋರ್ಟ್‌ಗೆ ಹೋದರೆ, ಇನ್ನಾರಿಗೋ ಶಿಕ್ಷೆ ಎಂಬಂತೆ ಆಗಿದೆ ಸರ್ಕಾರದ ನೀತಿ.

ಸಂತ್ರಸ್ತ ಅಭ್ಯರ್ಥಿಗಳ ಪ್ರಕಾರ, 402 ಮಂದಿ ಪಿಎಸ್‌ಐ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿ ಬೇರೆ ಯಾರೋ ಮಾಡಿದ ಯಾವುದೋ ತಪ್ಪಿಗೆ ನ್ಯಾಯಯುತವಾಗಿ ನೇರ ಆಯ್ಕೆಯಾಗಿರುವ ಈ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡದೆ ವಿಳಂಬಿಸಲಾಗುತ್ತಿದೆ. ಇದರಿಂದಾಗಿ ಆಯ್ಕೆಯಾದ ಈ ಅಭ್ಯರ್ಥಿಗಳು ನೇಮಕಾತಿಗೆ ಇನ್ನು ಮತ್ತೆ ಕಾಯುವ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಮಾಜಿ ಸೈನಿಕರ ಸಹಿತ ನೇರವಾಗಿ ಆಯ್ಕೆಯಾದ ಅಭ್ಯರ್ಥಿಗಳು ಬದಲಿ ಉದ್ಯೋಗವನ್ನು ತ್ಯಜಿಸಿದ್ದಾರೆ. ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗುವ ಭರವಸೆಯಲ್ಲಿ ಬೇರೆ ಉದ್ಯೋಗದತ್ತ ಚಿಂತಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಹಿಂದಿನ ಉದ್ಯೋಗವೂ ಇಲ್ಲ, ಪೊಲೀಸ್‌ ಕೆಲಸವೂ ಸಿಕ್ಕಿಲ್ಲ ಎಂಬಂತಾಗಿದೆ. ಇವರನ್ನೇ ನಂಬಿಕೊಂಡ ಕುಟುಂಬವೂ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಈ ಬಗ್ಗೆ ಗೃಹ ಸಚಿವರು ಹಾಗೂ ಎಡಿಜಿಪಿ ಗಮನಕ್ಕೆ ಸಂತ್ರಸ್ತ ಅಭ್ಯರ್ಥಿಗಳು ತಂದರೂ ಪ್ರಯೋಜನವಾಗಿಲ್ಲ.

ಪೊಲೀಸ್ ನೇಮಕಾತಿ ಕುರಿತಂತೆ ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಬೇಕಾದ್ದು ಬಹುಮುಖ್ಯ. ಈ ರೀತಿಯ ನೇಮಕಾತಿಗಳು ಪಾರದರ್ಶಕವಾಗಿ ತ್ವರಿತವಾಗಿ ಮುಕ್ತಾಯಗೊಳ್ಳಬೇಕು. ಈ ನಾಡಿನ ಭದ್ರತೆಗಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಲ್ಲಿರುವ ಯುವಜನತೆಯ ಕನಸುಗಳ ಜೊತೆ ಆಟವಾಡಬೇಡಿ. ನೇಮಕಾತಿ ಪತ್ರ ನೀಡುವಲ್ಲಿ ವಿಳಂಬ ಸಲ್ಲದು.

-ಆದೇಶ ಪ್ರತಿಯ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು.

----------------------