ಸಾರಾಂಶ
ಐವತ್ತು ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಗೋಣಿಕೊಪ್ಪ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಅಂತಾರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಐವತ್ತು ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಗೋಣಿಕೊಪ್ಪದ ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಗೋವಾ ರಾಜ್ಯದ ಮಾರ್ಗೋ ರವೀಂದ್ರ ಭವನ ಸಭಾಂಗಣದಲ್ಲಿ ಎರಡು ದಿನಗಳು ಸ್ಪರ್ಧೆ ನಡೆಯಿತು.
ಹತ್ತನೇ ವರ್ಷದ ರಾಷ್ಟ್ರೀಯ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ 50 ವಿದ್ಯಾರ್ಥಿಗಳು 12 ವರ್ಷದೊಳಗಿನ ವಿಭಾಗದಲ್ಲಿ, 15 ವರ್ಷದೊಳಗಿನ ಸ್ಪರ್ಧೆಯಲ್ಲಿ, 17 ವರ್ಷದ ವಿಭಾಗದ ಕ್ಲಾಸಿಕ್ ಮತ್ತು ಫೋಕ್, ಹಿಪ್‌ಹಾಪ್, ಪ್ರಿ ಸ್ಟೈಲ್ ನೃತ್ಯಗಳಲ್ಲಿ ಭಾಗವಹಿಸಿದರು.ಗೋವಾದ ಸ್ಪೋರ್ಟ್ಸ್ ಅಸೋಸಿಯೇಷನ್, ಸ್ಪೋರ್ಟ್ಸ್ ಡಾನ್ಸ್ ಫೆಡರೇಶನ್ ಆಫ್ ಇಂಡಿಯಾ, ಏಷ್ಯನ್ ಸ್ಪೋರ್ಟ್ಸ್ ಡಾನ್ಸ್ ಕೌನ್ಸಿಲ್, ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಶನ್, ಅಂತಾರಾಷ್ಟ್ರೀಯ ನೃತ್ಯ ಮಂಡಳಿ, ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ, ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಸ್ಪೋರ್ಟ್ ಸೈನ್ಸ್ ಮತ್ತು ಫಿಸಿಕಲ್ ಎಜುಕೇಶನ್ ಸಹಯೋಗದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ನೃತ್ಯ ತರಬೇತುದಾರ ಸೈಕ್ಲೋನ್ ರಮೇಶ್, ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಬಹಳಷ್ಟು ಸ್ಪರ್ಧಿಗಳೆಲ್ಲ ಎದುರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಕೊಡಗಿಗೆ ಹೆಮ್ಮೆ ತರುವ ವಿಚಾರ ಎಂದು ಹೇಳಿದರು. ಸೈಕ್ಲೋನ್ ರಮೇಶ್, ರವಿ, ದಿವ್ಯ, ವಿದ್ಯಾರ್ಥಿಗಳು, ಪೋಷಕರು ಇದ್ದರು.