ಕೆಪಿಎಸ್‌ಸಿ ಕಚೇರಿಯಿಂದ ಆಯ್ಕೆ ಪಟ್ಟಿಯೇ ನಾಪತ್ತೆ!

| Published : Mar 30 2024, 12:47 AM IST

ಸಾರಾಂಶ

ವಿವಾದಗಳಿಂದಲೇ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಮತ್ತೊಂದು ಅಚ್ಚರಿ ನಡೆದಿದ್ದು, ಈ ಬಾರಿ ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಯ ಆಯ್ಕೆ ಪಟ್ಟಿಯೇ ನಾಪತ್ತೆಯಾಗಿದೆ!

ಕನ್ನಡಪ್ರಭ ವಾರ್ತೆ ಬೆಂಗಳೂರುವಿವಾದಗಳಿಂದಲೇ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಮತ್ತೊಂದು ಅಚ್ಚರಿ ನಡೆದಿದ್ದು, ಈ ಬಾರಿ ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಯ ಆಯ್ಕೆ ಪಟ್ಟಿಯೇ ನಾಪತ್ತೆಯಾಗಿದೆ!

ಇಡೀ ಕಚೇರಿಯನ್ನು ತಡಕಾಡಿದರೂ ಆಯ್ಕೆಪಟ್ಟಿ ಕಡತ ಪತ್ತೆಯಾಗದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಗೆ ಕೆಪಿಎಸ್‌ಸಿ ಅಧಿಕಾರಿ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಾಗಿದೆ.

2016ರ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಖಾಲಿ ಇರುವ 9 ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ನೇಮಕಾತಿ ಪ್ರಕ್ರಿಯೆ ನಡೆಸಿ, 2018ರ ನವೆಂಬರ್ ತಿಂಗಳಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ, ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ವಿವೇಕಾನಂದ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಂತರ ಹೈಕೋರ್ಟ್‌ ಆದೇಶದಂತೆ ಕೆಪಿಎಸ್‌ಸಿಯ ಗೌಪ್ಯ ಶಾಖೆ-3ರಲ್ಲಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಅಲ್ಲಿಂದ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಶಾಖೆಗೆ ರವಾನಿಸಲು 2024ರ ಜನವರಿ 22ರಂದು ಕೆಪಿಎಸ್‌ಸಿ ಕಾರ್ಯದರ್ಶಿಯವರ ಆಪ್ತ ಶಾಖೆಗೆ ಕಳುಹಿಸಲಾಗಿತ್ತು. ಅಲ್ಲಿ ಕಡತ ಸ್ವೀಕೃತವಾಗಿದ್ದು, ತದನಂತರ ಲಭ್ಯವಾಗಿಲ್ಲ.

ಕಡತಕ್ಕಾಗಿ ಎಲ್ಲಾ ಶಾಖೆಗಳಲ್ಲಿ ಹುಡುಕಾಟ:

ಕಡತವು ಆಕಸ್ಮಿಕವಾಗಿ ಕೆಪಿಎಸ್‌ಸಿಯ ಬೇರೆ ಶಾಖೆಗಳಿಗೆ ಹೋಗಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಜ್ಞಾಪನದ ಮೂಲಕ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಶಾಖೆಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಕಡತ ಪತ್ತೆಯಾಗಿಲ್ಲ ಎಂಬ ಉತ್ತರ ಎಲ್ಲಾ ಶಾಖೆಗಳಿಂದ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಎಲ್ಲಾ ಶಾಖೆಗಳಿಗೆ ಖುದ್ದಾಗಿ ತೆರಳಿ ಕಡತಕ್ಕಾಗಿ ಹುಡುಕಾಟ ನಡೆಸಲಾಗಿದೆ. ಆಗಲೂ ಕಡತ ಸಿಕ್ಕಿಲ್ಲ. ಹೀಗಾಗಿ, ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಅಂತಿಮವಾಗಿ ಮಾ.13ರಂದು ಆಯೋಗದ ಸಭೆ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಲು ತೀರ್ಮಾನಿಸಲಾಗಿತ್ತು. ಸಹಾಯಕ ಕಾರ್ಯದರ್ಶಿ ರಾಘವೇದ್ರ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿರುವ ವಿಧಾನಸೌಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.