ಸಿಎಂಗೆ ತಲೆ ನೋವಾದ ಸ್ವ ಕ್ಷೇತ್ರದ ಅಭ್ಯರ್ಥಿ ಆಯ್ಕೆ

| Published : Mar 23 2024, 01:01 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಒಳಪಡುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಆಯ್ಕೆ ಕಗ್ಗಂಟಾಗೆ ಮುಂದುವರೆದಿದೆ.

ದೇವರಾಜು ಕಪ್ಪಸೋಗೆ ಕನ್ನಡಪ್ರಭ ವಾರ್ತೆ ಚಾಮರಾಜನಗರಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಒಳಪಡುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಆಯ್ಕೆ ಕಗ್ಗಂಟಾಗೆ ಮುಂದುವರೆದಿದೆ.ಕಾಂಗ್ರೆಸ್ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲೂ ಚಾಮರಾಜನಗರದ ಲೋಕಸಭಾ ಕಾಂಗ್ರೆಸ್‌ ಟಿಕೆಟ್ ಫೈನಲ್ ಆಗಿಲ್ಲ. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದು ಅಳೆದು-ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಸಮಾಜಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನು ಲೋಕ ಅಖಾಡಕ್ಕೆ ಇಳಿಸಬೇಕು ಎನ್ನುವುದು ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಅವರ ಒಲವಾಗಿದ್ದರೇ, ತನ್ನ ಬದಲು ಮಗ ಸುನೀಲ್ ಬೋಸ್ ಗೆ ಟಿಕೆಟ್ ಕೊಡುವಂತೆ ಎಚ್‌ಸಿಎಂ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ, ಕ್ಷೇತ್ರ ಇನ್ನೂ ಕಗ್ಗಂಟಾಗೇ ಉಳಿದಿದೆ.

ತನ್ನ ಬದಲು ಮಗ ಸುನೀಲ್ ಬೋಸ್ ಗೆ ಟಿಕೆಟ್ ಕೊಡುವಂತೆ ಸಚಿವ ಎಚ್‌.ಸಿ. ಮಹದೇವಪ್ಪ ಲಾಬಿ ನಡೆಸುತ್ತಿದ್ದು ಸಿದ್ದರಾಮಯ್ಯ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ. ಸಿಎಂ ವ್ಯಾಪ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕಾದ ಅನಿವಾರ್ಯತೆ ಇದ್ದು ಈಗಾಗಲೇ ಮೊದಲ ಬಾರಿಗೆ ಕಮಲ ಅರಳಿ ಬೀಗಿದೆ, ಮತ್ತೇ ಕೈ ವಶ ಮಾಡಿಕೊಳ್ಳಬೇಕಾದ ಅನಿವಾರ್ಯತೆ, ಮುಖ್ಯಮಂತ್ರಿ ಕ್ಷೇತ್ರದಲ್ಲಿ ಗೆಲ್ಲಿಸಬೇಕಾದ ಅನಿವಾರ್ಯತೆ ಎರಡೂ ಇದೆ. ಟಿಕೆಟ್ ರೇಸ್‌ನಲ್ಲಿ ಸುನೀಲ್ ಬೋಸ್, ಜಿ.ಎನ್‌.ನಂಜುಂಡಸ್ವಾಮಿ ಇದ್ದು ಎಲ್ಲರೂ ಲಾಬಿ ನಡೆಸುತ್ತಿದ್ದಾರೆ. ಅಂತಿಮವಾಗಿ ಸಿದ್ದರಾಮಯ್ಯ ಸೂಚಿಸಿದವರಿಗೆ ಎಂಪಿ ಟಿಕೆಟ್ ಸಿಗಲಿದ್ದು, ಯಾರಾಗುತ್ತಾರೆ ಹುರಿಯಾಳು ಎಂಬುದೇ ಇನ್ನೂ ಸಸ್ಪೆನ್ಸ್ ಆಗೇ ಉಳಿದಿದೆ. ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ಮಹಾದೇವಪ್ಪ ಅವರೇ ಚುನಾವಣೆಗೆ ನಿಲ್ಲುವರೋ ಇಲ್ಲವೇ ಮಗನಿಗೆ ಟಿಕೆಟ್ ಕೊಡಿಸುತ್ತಾರೋ, ಕಾದು ನೋಡಬೇಕಿದೆ.

ಮಹದೇವಪ್ಪಗೆ ಒತ್ತಡ ಏಕೆ?:ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಈ ಹಿಂದೆ ಜನತಾದಳದಲ್ಲಿ ಇದ್ದಾಗ ಒಮ್ಮೆ ಲೋಕಸಭೆಗೆ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಮೈಸೂರು ಮತ್ತು ಚಾಮರಾಜನಗರ ಎರಡು ಜಿಲ್ಲೆಯ ತಲಾ ನಾಲ್ಕು ಕ್ಷೇತ್ರ ಹೊಂದಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ಚಿರಪರಿಚಿತರು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವ ಕ್ಷೇತ್ರವನ್ನು ಗೆಲ್ಲಲು ಮಹದೇವಪ್ಪ ಅವರನ್ನು ಕಣಕ್ಕಿಳಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಮಹದೇವಪ್ಪ ಅವರು ಸ್ಪರ್ಧೆಗೆ ಒಪ್ಪುತ್ತಿಲ್ಲ. ಇದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ.