ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ವಿಜಯದಶಮಿಯಂದು ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ ಸಸ್ಯ ಕಾಶಿ ಎಂದೇ ಹೆಸರುವಾಸಿಯಾದ ಸಿದ್ಧರಬೆಟ್ಟದ ಸ್ತಬ್ದಚಿತ್ರ ಆಯ್ಕೆಯಾಗಿ ಪ್ರದರ್ಶನಗೊಳ್ಳಲಿದೆ.ತುಮಕೂರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಅವರು ವಿಶೇಷ ಆಸಕ್ತಿವಹಿಸಿ ಜಿಲ್ಲೆಯ ಐದು ಪ್ರಮುಖ ಇತಿಹಾಸ ಪ್ರಸಿದ್ಧ ಕ್ಷೇತ್ರಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಕಲಾವಿದರಿಂದ ವಿನ್ಯಾಸಗೊಳಿಸಿದ್ದು, ಅಂತಿಮವಾಗಿ ಕೊರಟಗೆರೆ ತಾಲೂಕಿನ ಸಿದ್ಧರ ಬೆಟ್ಟವನ್ನು ಆಯ್ಕೆ ಮಾಡಲಾಗಿದೆ.
ಮಧುಗಿರಿಯ ಏಷ್ಯಾದ ಏಕಶಿಲಾ ಬೆಟ್ಟ ಮತ್ತು ಚನ್ನರಾಯನದುರ್ಗಾ ಸೇರಿದಂತೆ ಔಷಧಿ ಸಸ್ಯಗಳ ಸಂಜೀವಿನಿ ಪರ್ವತವಾದ ಸಿದ್ಧರಬೆಟ್ಟ ಹಾಗೂ ಬಯಲು ಸೀಮೆಯನ್ನಾಳಿದ ಹೆಮ್ಮೆಯ ಅರಸರು ಎನ್ನುವ ಐತಿಹಾಸಿಕ ಹಿನ್ನಲೆಯ ವಿಷಯಾಧಾರಿತ ಸ್ತಬ್ದಚಿತ್ರ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪ್ರದರ್ಶನಗೊಳ್ಳಲಿದ್ದು, ಕೊರಟಗೆರೆ ತಾಲೂಕಿನ ಇದು ಸ್ಥಳವನ್ನು ಜಿಲ್ಲೆಯನ್ನು ಪ್ರತಿನಿಧಿಸಲಿದೆ.ಸ್ತಬ್ದಚಿತ್ರದ ವಿಶೇಷತೆ ಏನು..೧೧ ಅಡಿ ಅಗಲ, ೧೨ ಎತ್ತರ ಮತ್ತು ೩೨ ಅಡಿ ಉದ್ದವಿರುವ ಸ್ತಬ್ದ ಚಿತ್ರದ ಮುಂದಿನ ಅರ್ಧ ಭಾಗದಲ್ಲಿ ಸಿದ್ದರಬೆಟ್ಟ, ಹಿಂದಿನ ಅರ್ಧಬಾಗದಲ್ಲಿ ಒಂದು ಪಾರ್ಶ್ವದಲ್ಲಿ ಮಧುಗಿರಿ ಬೆಟ್ಟ, ಮತ್ತೊಂದು ಪಾರ್ಶ್ವದಲ್ಲಿ ಚನ್ನರಾಯನದುರ್ಗಾ ಪ್ರಕೃತಿ ಅನಾವರಣಗೊಳ್ಳಲಿದೆ. ಮುಂಭಾಗದಲ್ಲಿ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರಸ್ವಾಮಿ ಮತ್ತು ಗುಹೆಗಳು, ಮೆಟ್ಟಿಲುಗಳು, ಮಹಾದ್ವಾರವನ್ನ ಕಾಣಬಹುದಾಗಿದೆ.೨೦೧೪ರಿಂದಲೂ ಜಿಲ್ಲೆಯನ್ನು ದಸರಾ ಜಂಬೂ ಸವಾರಿಯಲ್ಲಿ ೬ ಬಾರಿ ಪ್ರತಿನಿಧಿಸಿ ೫ ಬಾರಿ ಬಹುಮಾನ ತಂದುಕೊಟ್ಟ ತಿಪಟೂರಿನ ಕಲಾಕೃತಿ ತಂಡದ ಕಲಾವಿದ ತಿಪಟೂರು ಕೃಷ್ಣ ಅವರ ತಂಡ ಈ ಸಲವೂ ಸಿದ್ದರಬೆಟ್ಟದ ಕಲಾಕೃತಿಯ ಹೊಣೆಹೊತ್ತು ಸ್ತಬ್ದಚಿತ್ರವನ್ನ ತಯಾರು ಮಾಡಿದ್ದಾರೆ.ಸಿದ್ಧರ ಬೆಟ್ಟದ ಸ್ತಬ್ದಚಿತ್ರದ ಮಾಹಿತಿಸಂಜೀವಿನಿ ಪರ್ವತ ಎಂದೇ ಹೆಸರುವಾಸಿಯಾದ ಸಿದ್ದರಬೆಟ್ಟ ಮತ್ತು ಬಯಲು ಸೀಮೆಯನ್ನಾಳಿದ ಹೆಮ್ಮೆಯ ಅರಸು. ಕೇವಲ ಸ್ಪರ್ಶದಿಂದಲೇ ಕಬ್ಬಿಣವು ಬಂಗಾರವಾಗುವ ಔಷಧಿ ಸಸ್ಯಗಳ ಈ ಸಿದ್ದರಬೆಟ್ಟದಲ್ಲಿ ಇವೆ. ಸಮುದ್ರ ಮಟ್ಟದಿಂದ ೨೬೫೦ ಅಡಿ ಎತ್ತರದಲ್ಲಿರುವ ಸಿದ್ದರಬೆಟ್ಟ, ಬಂಡೆಗಳಿಂದ ಅವೃತವಾಗಿದ್ದು, ವನಸ್ಪತಿ ಸಿಂಧು, ಆಕರ್ಷಕ ಪ್ರವಾಸಿ ತಾಣ, ಸಿದ್ದನಗಿರಿ ಜ್ಞಾನಪೀಠ, ಸಿದ್ದಯೋಗಿಗಳ ತಪೋವನ, ಸಂತರ ಬೆಟ್ಟ, ಕರಂಕೋಟೆ ಆಳಿದ ಕುರಂಗರಾಯನ ಬೆಟ್ಟ. ಆಗಿದ್ದು, ಶ್ರೀ ಸಿದ್ದೇಶ್ವರ ಸ್ವಾಮಿಗಳ ಪಾದ ಸ್ಪರ್ಶದಿಂದ ಸಿದ್ದರಬೆಟ್ಟ ಎನ್ನಲಾಗಿದೆ. ಕೊರಟಗೆರೆ ತಾಲೂಕಿನ ಇತಿಹಾಸ ಪ್ರಸಿದ್ದ ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟ ಈ ಬಾರಿ ಮೈಸೂರಿನಲ್ಲಿ ನಡೆಯಲಿರುವ ಜಂಬೂ ಸವಾರಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ತಾಲೂಕಿನ ಸಂಸ್ಕೃತಿ, ಹಾಗೂ ಪರಂಪರೆಯನ್ನ ದೇಶ ಹಾಗೂ ರಾಜ್ಯದ್ಯಾಂತ ಬರುವ ಜನರು ವೀಕ್ಷಣೆ ಮಾಡಲಿದ್ದಾರೆ. ಕೆ.ಮಂಜುನಾಥ್, ತಹಸೀಲ್ದಾರ್, ಕೊರಟಗೆರೆ.
ಈ ಬಾರಿ ಮೈಸೂರಿನ ಸ್ತಬ್ದಚಿತ್ರ ನಿರ್ಮಾಣ ಸಮಿತಿಗೆ ಕಲ್ಪತರುನಾಡಿನ ಕಲ್ಪವೃಕ್ಷ, ರೇಷ್ಮೆ ಪ್ರಗತಿಯಲ್ಲಿ ತುಮಕೂರು ಜಿಲ್ಲೆ, ಸಿದ್ದೇಶ್ವರ ಬೆಟ್ಟ ಮೂರು ಸ್ತಬ್ದಚಿತ್ರದಲ್ಲಿ ಕೊರಟಗೆರೆ ತಾಲೂಕಿನ ಸಸ್ಯ ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟವನ್ನ ಆಯ್ಕೆ ಮಾಡಲಾಗಿದ್ದು, ಇಲ್ಲಿನ ರಾಜರ ಆಳ್ವಿಕೆ ಹಾಗೂ ಚನ್ನರಾಯನದುರ್ಗ ಕೋಟೆಯನ್ನ ಈ ಸ್ತಬ್ದಚಿತ್ರದಲ್ಲಿ ತರಲಾಗಿದೆ. ತಿಪಟೂರು ಕೃಷ್ಣ, ಸ್ತಬ್ದಚಿತ್ರ ತಯಾರಿಸಿದ ಕಲಾವಿದ.