ಗ್ಯಾರಂಟಿಯಿಂದ 12ರಷ್ಟು ಸ್ವಯಂ ಉದ್ಯೋಗ ಹೆಚ್ಚಳ: ಮೆಹರೋಜ್ ಖಾನ್

| Published : Feb 06 2025, 12:15 AM IST

ಗ್ಯಾರಂಟಿಯಿಂದ 12ರಷ್ಟು ಸ್ವಯಂ ಉದ್ಯೋಗ ಹೆಚ್ಚಳ: ಮೆಹರೋಜ್ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಸುಮಾರು ಶೇ. 12ರಷ್ಟು ಸ್ವಯಂ ಉದ್ಯೋಗ ಸೃಷ್ಟಿಯಾಗಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಸುಮಾರು ಶೇ. 12ರಷ್ಟು ಸ್ವಯಂ ಉದ್ಯೋಗ ಸೃಷ್ಟಿಯಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದ್ದು, ಅರ್ಹರು ಎಲ್ಲರೂ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸೂಕ್ತ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು.

ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆದುಕೊಂಡು ಸ್ವಯಂ ಉದ್ಯೋಗ ಮಾಡಿಕೊಂಡವರ ಸುಮಾರು 10 ಜನರ ಮಾಹಿತಿಯನ್ನು ನೀಡಬೇಕು ಹಾಗೂ ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾದವರ ಕುರಿತು ಒಂದು ವಾರದೊಳಗೆ ಮಾಹಿತಿ ನೀಡಬೇಕು ಎಂದು ಸಿಡಿಪಿಒಗೆ ಸೂಚಿಸಿದರು.ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯ ಮೂಲಕ ಕೆಲವರು ಟೈಲರಿಂಗ್ ಮಿಷಿನ್ ತೆಗೆದುಕೊಂಡಿದ್ದಾರೆ. ಕುರಿ, ಆಕಳು ಸಾಕಾಣಿಕೆ ಜತೆಗೆ ಕೆಲವರು ಬಟ್ಟೆ ಅಂಗಡಿ ಹಾಕಿಕೊಂಡಿದ್ದಾರೆ ಎಂದು ಸಿಡಿಪಿಒ ಯಲ್ಲಮ್ಮ ಹಂಡಿ ಮಾಹಿತಿ ನೀಡಿದರು.

ಸಾರಿಗೆ ಬಸ್ಸಿನಲ್ಲಿ ಮಂಗಳಮುಖಿಯವರನ್ನು ಚಾಲಕರು ಹಾಗೂ ನಿರ್ವಾಹಕರು ಕೆಟ್ಟದೃಷ್ಟಿಯಿಂದ ನೋಡುತ್ತಿರುವ ಬಗ್ಗೆ ದೂರು ಬಂದಿವೆ. ಡಿಪೋ ಮ್ಯಾನೇಜರ್‌ ಸಭೆ ಮಾಡುವ ಮೂಲಕ ಅವರಿಗೆ ತಿಳುವಳಿಕೆ ಹೇಳಬೇಕು. ಮಂಗಳಮುಖಿಯವರಿಗೆ ಜಿಲ್ಲಾಧಿಕಾರಿ ಐಡಿ ಕಾರ್ಡನ್ನು ಕೊಟ್ಟಿದ್ದಾರೆ. ಆ ಐಡಿ ಕಾರ್ಡನ್ನು ನೋಡಿಕೊಂಡು ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕುಷ್ಟಗಿ ಬಸ್ ಡಿಪೋ ಮ್ಯಾನೇಜರ ಸುಂದರಗೌಡ ಪಾಟೀಲಗೆ ತಿಳಿಸಿದರು.

ಸರಿಯಾದ ರೀತಿಯಲ್ಲಿ ನ್ಯಾಯಬೆಲೆ ಅಂಗಡಿಯವರು ಆಹಾರ ಧಾನ್ಯ ಪೂರೈಸುವುದಿಲ್ಲ ಎಂದು ದೂರು ಇದ್ದು, ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಎಲ್ಲಾ ಕಾರ್ಡ್‌ದಾರರಿಗೆ ಆಹಾರ ಧಾನ್ಯ ಕೊಡಬೇಕು. ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇತ್ತೀಚೆಗೆ ಜೋಳ ನೀಡುತ್ತಿದ್ದು, ಆ ಜೋಳವು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿರುವ ದೂರು ಇರುವ ಕಾರಣ ಕಳಪೆ ಆಹಾರವನ್ನು ವಾಪಸ್‌ ಕಳಿಸಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ ಇಲಾಖೆಯ ಡಿಡಿ ಸೋಮಶೇಖರಯ್ಯ ಮಾತನಾಡಿ, ಕಳೆದ ವರ್ಷದ ಜೋಳವಾಗಿದ್ದರಿಂದ ಹಾಳಾಗಿದ್ದು, ಈ ತಿಂಗಳಿನಿಂದ ಜೋಳ ವಿತರಣೆ ಸ್ಥಗಿತಗೊಂಡಿದೆ. ಕಳೆದ ಸೆಪ್ಟೆಂಬರ್‌ ತಿಂಗಳಿನಿಂದ ಅನ್ನಭಾಗ್ಯ ಹಣ ಜಮೆಯಾಗಿಲ್ಲ ಎಂದರು.

ಜೆಸ್ಕಾಂ ಎಇಇ ಕೆಂಚಪ್ಪ ಬಾವಿಮನಿ ಮಾತನಾಡಿ, ತಾಲೂಕಿನಲ್ಲಿ ಗೃಹಜ್ಯೋತಿ ಸುಮಾರು ಶೇ.97 ಯಶಸ್ವಿಯಾಗಿದ್ದು, ಒಟ್ಟು 55961 ಫಲಾನುಭವಿಗಳ ಪೈಕಿ 51428 ಫಲಾನಭವಿಗಳು ಗೃಹಜ್ಯೋತಿಯ ಲಾಭವನ್ನು ಪಡೆಯುತ್ತಿದ್ದಾರೆ. ಉಳಿದ 4533 ಜನರ ಪೈಕಿ 99 ಫಲಾನಭವಿಗಳು ಬಾಕಿ ಇದ್ದು, ಅವರು ದುಡಿಯಲು ಗುಳೆ ಹೋದವರು ಇರಬಹುದು ಹಾಗೂ ಇನ್ನುಳಿದ ಸರ್ಕಾರಿ ಕಟ್ಟಡ, ದೇವಸ್ಥಾನ ಇವೆ. ಹೊಸ ನೋಂದಣಿಗಾಗಿ ಕಾರ್ಯಾಲಯದಲ್ಲಿ ಕೌಂಟರ್‌ ತೆರೆದಿದ್ದು ನೋಂದಣಿ ಮಾಡಿಕೊಳ್ಳಬಹುದು ಎಂದರು.

ಯುವನಿಧಿ ನೋಡಲ್ ಅಧಿಕಾರಿ ಶಿವಯೋಗಿ ಹೊಸಳ್ಳಿ, ತಾಲೂಕಿನಲ್ಲಿ ಒಟ್ಟು 1577 ಜನರು ಯುವನಿಧಿಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ನೋಂದಣಿ ಪ್ರಕ್ರಿಯೆಯು ಆರಂಭದಲ್ಲಿದೆ ಎಂದರು.

ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಶ್ರೀನಿವಾಸ ರೆಡ್ಡಿ ಮಾತನಾಡಿದರು. ಈ ಸಂದರ್ಭ ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತಾಪಂ ಇಒ ಪಂಪಾಪತಿ ಹಿರೇಮಠ, ಗ್ಯಾರಂಟಿ ಸಮಿತಿ ಅಧ್ಯಕ್ಷ ಫಾರೂಖ್‌ ಡಾಲಾಯತ್, ಶಾರದಾ ಕಟ್ಟಿಮನಿ, ನಾಗರಾಜ, ಮಂಜುನಾಥ ಗೊಂಡಬಾಳ ಸೇರಿದಂತೆ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರು ಅನುಷ್ಠಾನ ಸಮಿತಿಯ ಅಧಿಕಾರಿಗಳು ಇದ್ದರು.