ಸ್ವ ಉದ್ಯೋಗದಿಂದ ಮಹಿಳೆಯರ ಆತ್ಮವಿಶ್ವಾಸ, ಗೌರವ ಹೆಚ್ಚಳ: ಹೇಮಾವತಿ ಹೆಗ್ಗಡೆ

| Published : Mar 17 2024, 02:03 AM IST

ಸ್ವ ಉದ್ಯೋಗದಿಂದ ಮಹಿಳೆಯರ ಆತ್ಮವಿಶ್ವಾಸ, ಗೌರವ ಹೆಚ್ಚಳ: ಹೇಮಾವತಿ ಹೆಗ್ಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹೇಮಾವತಿ ವೀ. ಹೆಗ್ಗಡೆಯವರ ಭಾಷಣದ ಮಾಹಿತಿ, ಮಾರ್ಗದರ್ಶನದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸೆಲ್ಕೊ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಂದೆ, ಇತರ ಭಾಷೆಗಳಿಗೂ ಅದನ್ನು ಅನುವಾದ ಮಾಡಿ ಪ್ರಕಟಿಸುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮಹಿಳೆಯರು ಮನೆ ಮತ್ತು ಮನ ಬೆಳಗುವ ಸೂರ್ಯನಂತೆ ಸದಾ ಪ್ರಕಾಶಮಾನವಾಗಿರುತ್ತಾರೆ. ಮಹಿಳೆಯರು ಮನಸ್ಸು ಮಾಡಿದರೆ ಏನೂ ಮಾಡಬಲ್ಲರು. ಅವರ ಶ್ರಮದ ಫಲ ಎಲ್ಲರಿಗೂ ಹಂಚಿ ಹೋಗುತ್ತದೆ. ಮಹಿಳೆಯರು ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದು ಸ್ವ-ಉದ್ಯೋಗದಿಂದ ಮಹಿಳೆಯರ ಆತ್ಮವಿಶ್ವಾಸ, ಗೌರವ ಹೆಚ್ಚಾಗುತ್ತದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಂಗಳೂರಿನ ಸೆಲ್ಕೊ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸೂಕ್ಷ್ಮಮತಿಗಳಾಗಿದ್ದು ಸಂಸಾರ, ವ್ಯವಹಾರ ಮತ್ತು ಸ್ವ-ಉದ್ಯೋಗವನ್ನು ಜಾಣ್ಮೆಯಿಂದ ಹಾಗೂ ಸಮನ್ವಯದಿಂದ ನಿಭಾಯಿಸಿ ತಮಗೆ ಸಿಗುವ ಅವಕಾಶದ ಸದುಪಯೋಗ ಪಡೆದು ಎಲ್ಲರ ಪ್ರೀತಿ- ವಿಶ್ವಾಸಕ್ಕೆ ಪಾತ್ರರಾಗುತ್ತಾರೆ. ಮಹಿಳೆಯರನ್ನು ಎಲ್ಲರೂ ನಂಬುತ್ತಾರೆ. ಬಾಲ್ಯ ಮತ್ತು ವೃದ್ಧಾಪ್ಯದಲ್ಲಿ ಎಲ್ಲರೂ ಪರಾವಲಂಬಿಗಳಾಗುತ್ತಾರೆ. ಆದುದರಿಂದ ಯೌವನದಲ್ಲಿ ಪರಿಶ್ರಮಪಟ್ಟು ಸಂಪಾದನೆ ಮಾಡಬೇಕು. ಮಹಿಳೆಯರನ್ನು ಮದುವೆಗಾಗಿ ಬೆಳೆಸದೆ, ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಸಂಸ್ಕಾರ ನೀಡಿ ಸಾರ್ಥಕ, ಸ್ವಾವಲಂಬಿ ಜೀವನಕ್ಕಾಗಿ ಬೆಳೆಸಬೇಕು ಎಂದು ಹೇಮಾವತಿ ವೀ. ಹೆಗ್ಗಡೆ ಸಲಹೆ ನೀಡಿದರು.ಸ್ವ-ಸಹಾಯ ಸಂಘಗಳು ಹಾಗೂ ಸೌರಶಕ್ತಿ ಬಳಕೆಯಲ್ಲಿಯೂ ಮಹಿಳೆಯರ ಸೇವೆ-ಸಾಧನೆಯನ್ನು ಅವರು ಶ್ಲಾಘಿಸಿ, ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸೌರಶಕ್ತಿ ಅಪಾರ ಶಕ್ತಿಯ ಮೂಲವಾಗಿದ್ದು ಎಲ್ಲರೂ ಪ್ರಯೋಗಶೀಲರಾಗಿ, ಸಂಶೋಧಕರಾಗಿ ಹೊಸ ಆವಿಷ್ಕಾರಗಳನ್ನು ಮಾಡಿ ಸೌರಶಕ್ತಿಯ ಸದುಪಯೋಗ ಮಾಡಬೇಕು. ಗ್ರಾಮೀಣ ಪ್ರದೇಶಗಳ ಜನರು ಕೂಡಾ ಅನೇಕ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಯಶಸ್ವಿ ಮಹಿಳಾ ಉದ್ಯಮಿಗಳ ಪರವಾಗಿ ಹುಬ್ಬಳ್ಳಿಯ ರೂಪಾ ರೆಡ್ಡಿ ಮತ್ತು ಬೆಳಗಾವಿಯ ಪ್ರಮೋದ್ ಮೋದಿ ತಮ್ಮ ಸಾಧನೆಯ ಅನುಭವವನ್ನು ಹಂಚಿಕೊಂಡರು. ಸ್ವಾಮಿ ವಿವೇಕಾನಂದ ಯುವಚಳವಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಸುಳುಗೋಡು ಮಾತನಾಡಿ, ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲೀಕರಣಗೊಂಡಾಗ ಮಾತ್ರ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ. ಪ್ರಸ್ತುತ ೧೦೦೦ ಪುರುಷರಿದ್ದಲ್ಲಿ ೯೧೪ ಮಹಿಳೆಯರು ಮಾತ್ರ ಇದ್ದಾರೆ. ಹೆಣ್ಣುಭ್ರೂಣಹತ್ಯೆ ತಡೆದು ಲಿಂಗತಾರತಮ್ಯ ನಿವಾರಣೆಯಾಗಬೇಕು ಎಂದು ಅವರು ಸಲಹೆ ನೀಡಿದರು. ಹೇಮಾವತಿ ವೀ. ಹೆಗ್ಗಡೆಯವರ ಭಾಷಣದ ಮಾಹಿತಿ, ಮಾರ್ಗದರ್ಶನದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸೆಲ್ಕೊ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಂದೆ, ಇತರ ಭಾಷೆಗಳಿಗೂ ಅದನ್ನು ಅನುವಾದ ಮಾಡಿ ಪ್ರಕಟಿಸುವುದಾಗಿ ಭರವಸೆ ನೀಡಿದರು. ಈಗ ಓದುವ ಹವ್ಯಾಸ ಕಡಿಮೆ ಇರುವುದರಿಂದ ಭಾಷಣದ ವೀಡಿಯೊ ಬುಕ್ ತಯಾರಿಸುವಂತೆ ಅವರು ಸಲಹೆ ನೀಡಿದರು.

ಮುಂದಿನ ವರ್ಷ ಸೌರಶಕ್ತಿ ಬಳಕೆ ಬಗ್ಗೆ ಜಾಗತಿಕ ಸಮ್ಮೇಳನವನ್ನು ಧರ್ಮಸ್ಥಳದಲ್ಲಿ ಆಯೋಜಿಸುವುದಾಗಿ ಅವರು ಭರವಸೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಎಸ್.ಎಸ್. ಉಪಸ್ಥಿತರಿದ್ದರು. ಸೆಲ್ಕೊ ಸೋಲಾರ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ್ ಭಾಸ್ಕರ ಹೆಗಡೆ ಸ್ವಾಗತಿಸಿದರು. ಸೌಮ್ಯ ವಂದಿಸಿದರು. ಶ್ರೀನಿವಾಸ ಪೂಜಾರಿ, ಗುರುಪ್ರಸಾದ್ ಮತ್ತು ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.