ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾಡಳಿತ, ಜಿಪಂ, ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ಜಿಲ್ಲಾ ಮಟ್ಟದ ಪ್ರದರ್ಶನ ಹಾಗೂ ಮಾರಾಟ ಮೇಳ ಮಂಗಳೂರು ತಾಲೂಕು ಪಂಚಾಯ್ತಿ ಆವರಣದಲ್ಲಿ ನಡೆಯಿತು.ಜಿ.ಪಂ. ಯೋಜನಾ ನಿರ್ದೇಶಕ ಕೆ.ಇ. ಜಯರಾಂ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ಪ್ರದೇಶದ ಸ್ವಸಹಾಯ ಗುಂಪಿನ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಂಜೀವಿನಿ ಎನ್ಆರ್‌ಎಲ್ಎಂ ಸಂಸ್ಥೆ ಉತ್ತಮ ವೇದಿಕೆ ಕಲ್ಪಿಸುತ್ತಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವ ಜತೆಗೆ, ಆಹಾರ ಗುಣಮಟ್ಟ, ಸುರಕ್ಷತೆಯ ಪ್ರಮಾಣಪತ್ರ ಹಾಗೂ ಉದ್ದಿಮೆ ನೋಂದಣಿ ಪ್ರಮಾಣ ಪತ್ರ ಪಡೆಯಲು ನೀಡುವ ಪ್ರೋತ್ಸಾಹದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಜೆ. ಸ್ವಸಹಾಯ ಗುಂಪುಗಳ ಉತ್ಪನ್ನಗಳ ಮಳಿಗೆಗಳನ್ನು ಉದ್ಘಾಟಿಸಿದರು.ಮಂಗಳೂರು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ತಾ.ಪಂ. ಸಹಾಯಕ ನಿರ್ದೇಶಕ ಮಹೇಶ್, ಸಾನಿಧ್ಯ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆ ಕವಿತಾ ವೇದಿಕೆಯಲ್ಲಿದ್ದರು.
ಇದೇ ಸಂದರ್ಭ ಜಿಲ್ಲೆಯ ಸಂಜೀವಿನಿ ಒಕ್ಕೂಟಗಳ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಬಹುಮಾನ ನೀಡಲಾಗಿದ್ದು, ಗುತ್ತಿಗಾರು ಅಮರ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟಕ್ಕೆ ಅತ್ಯುತ್ತಮ ಒಕ್ಕೂಟ ಪ್ರಶಸ್ತಿ ಹಾಗೂ 1 ಲಕ್ಷ ರು. ನಗದು, ಗೋಳ್ತಮಜಲು ಆಶೀರ್ವಾದ ಸಂಜೀವಿನಿ ಗ್ರಾ.ಪಂ. ಒಕ್ಕೂಟಕ್ಕೆ ಪ್ರಶಸ್ತಿ ಪತ್ರ ಹಾಗೂ 75 ಸಾವಿರ ರು. ನಗದು ಹಾಗೂ ಬಲ್ನಾಡು ಸಮೃದ್ಧಿ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟಕ್ಕೆ ಪ್ರಶಸ್ತಿ ಪತ್ರ ಹಾಗೂ 50 ಸಾವಿರ ರು. ನಗದು ಬಹುಮಾನ ವಿತರಿಸಲಾಯಿತು.ಕ್ರಿಯಾಶೀಲ ಸ್ವಸಹಾಯ ಗುಂಪುಗಳ ಪೈಕಿ ಗೋಳ್ತಮಜಲು ಶ್ರೀ ಸಿದ್ಧಿವಿನಾಯಕ ಸ್ವಸಹಾಯ ಗುಂಪಿಗೆ 75 ಸಾವಿರ ರು. ನಗದು, ತಣ್ಣೀರುಪಂತ ಲಕ್ಷ್ಮೀ ಸಂಜೀವಿನಿ ಒಕ್ಕೂಟಕ್ಕೆ 50 ಸಾವಿರ ರು. ನಗದು, ಕೋಡಿಂಬಾಡಿ ವಿಜಯ ಶ್ರೀ ಸ್ವಸಹಾಯ ಸಂಘಕ್ಕೆ 25 ಸಾವಿರ ರು. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲೆಯ ವಿವಿಧ ಗುಂಪು ಒಕ್ಕೂಟಗಳ 30 ಮಳಿಗೆಗಳಲ್ಲಿ 70ಕ್ಕೂ ಅಧಿಕ ಉತ್ಪನ್ನಗಳು ಗಮನ ಸೆಳೆದವು.
ನಲ್ಮ್ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಐರಿನ್ ರೆಬೆಲ್ಲೋ ಸ್ವಾಗತಿಸಿದರು. ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ವಂದಿಸಿದರು. ಜಯಾನಂದ ಬೆಳ್ತಂಗಡಿ ನಿರೂಪಿಸಿದರು. ಮಧ್ಯಾಹ್ನದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕಿ ವಾಣಿಶ್ರೀ ನಿರ್ವಹಿಸಿದರು.