ಪಟ್ಟಣದ ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಕಿರಾಣಿ, ತರಕಾರಿ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರಿಂದ ಕೂಡ್ಲಿಗಿ ಬಂದ್ ಯಶಸ್ವಿಯಾಗಿತ್ತು.
ಕೂಡ್ಲಿಗಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಡಾ.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಸಂವಿಧಾನ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಪಟ್ಟಣದಲ್ಲಿ ಯಾವುದೇ ಬಸ್ ಸೇರಿದಂತೆ ಇತರೆ ವಾಹನಗಳು ಸಂಚಾರವಿಲ್ಲದೇ ಹಾಗೂ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಬಹುತೇಕ ಸಂಪೂರ್ಣ ಬಂದ್ ಯಶಸ್ವಿಯಾಯಿತು.
ಗುರುವಾರ ಬೆಳಿಗ್ಗೆ 9 ಗಂಟೆ ತನಕ ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ನಡೆಸಿದರಾದರೂ ನಂತರ ಬಂದ್ ಕರೆ ನೀಡಿದ್ದ ಸಂಘಟಕರು ಬಂದ್ ಗೆ ಸಹಕರಿಸುವಂತೆ ಹೇಳಿದ್ದರಿಂದ ಸಾರಿಗೆ ಬಸ್ ಸಂಚಾರ ನಿಲ್ಲಿಸಲಾಯಿತು.ಕೊಟ್ಟೂರು, ಹೊಸಪೇಟೆ ಹಾಗೂ ಬೆಂಗಳೂರು ಕಡೆ ಹೋಗುವ ಪ್ರಯಾಣಿಕರಿಗೆ ಕೊಟ್ಟೂರು ರಸ್ತೆ ಬೈಪಾಸ್ ಹತ್ತಿರ ಬಸ್ಸುಗಳ ನಿಲುಗಡೆ ಮಾಡಿ ಸಂಡೂರು ಕಡೆ ಹೋಗುವ ಜನತೆಗೆ ರೇಷ್ಮೆ ಇಲಾಖೆ ಹತ್ತಿರ ಬಸ್ ನಿಲುಗಡೆ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರಿಗೆ ಅಷ್ಟೊಂದು ತೊಂದರೆ ಕಾಣಲಿಲ್ಲ.
ಅಂಗಡಿ ಮುಂಗಟ್ಟು ಬಂದ್:ಪಟ್ಟಣದ ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಕಿರಾಣಿ, ತರಕಾರಿ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರಿಂದ ಕೂಡ್ಲಿಗಿ ಬಂದ್ ಯಶಸ್ವಿಯಾಗಿತ್ತು.
ಪಟ್ಟಣದಲ್ಲಿ ಇಂದು ನಡೆದ ಬಂದ್ ಗೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ನೇತೃತ್ವದಲ್ಲಿ ಕೂಡ್ಲಿಗಿ ಸಿಪಿಐ ಸುರೇಶ ಎಸ್ ತಳವಾರ್, ಕೂಡ್ಲಿಗಿ ಪಿಎಸ್ಐ ಪ್ರಕಾಶ ಸೇರಿದಂತೆ ಎಎಸ್ ಐಗಳು, ಎಚ್ ಸಿ, ಪಿಸಿಗಳು, ಡಿಆರ್ ವಾಹನ ಸೇರಿ ಸುಮಾರು 80ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ನೀಡಲಾಗಿತ್ತು.ಪ್ರತಿಭಟನಾಕಾರರು ಕೂಡ್ಲಿಗಿಯ ಮಹಾತ್ಮಾ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ಆವರಣದಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಸಂಚರಿಸಿ ನಂತರ ಮದಕರಿ ವೃತ್ತಕ್ಕೆ ಆಗಮಿಸಿತು. ಪ್ರತಿಭಟನೆಯಲ್ಲಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಸಮಾವೇಶ ನಡೆಸಲಾಯಿತು. ನಂತರ ಕೂಡ್ಲಿಗಿ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಸಂವಿಧಾನ ಸಂರಕ್ಷಣಾ ವೇದಿಕೆ ಸೇರಿದಂತೆ ಅಂಬೇಡ್ಕರ್ ಸಂಘ, ದಲಿತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಸಹ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂದ್ ಕರೆಯನ್ನು ಯಶಸ್ವಿಗೊಳಿಸಿದರು.