ಗುರುವಿನ ಉಪದೇಶದಿಂದ ಆತ್ಮಪ್ರಕಾಶನ

| Published : Oct 24 2024, 12:36 AM IST

ಸಾರಾಂಶ

ಹುಟ್ಟು ಸಾವುಗಳಿಂದ ಮುಕ್ತವಾಗುವಿಕೆಯೇ ಮೋಕ್ಷ. ಜ್ಞಾನವನ್ನು ಪಡೆದು ಬುದ್ಧಿಯಿಂದ ಚಿಂತನೆ ಮಾಡುವ ಕಾರಣ ಅನಂತಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಠ ಜೀವಿ. ಮಾಯೆಯ ಪೊರೆಯನ್ನು ಕಳಚಿದಾಗ ಮಾತ್ರ ಮೋಕ್ಷದ ಹಾದಿಯು ಕಾಣುತ್ತದೆ. ಮಾಯೆಯ ಪ್ರಾಬಲ್ಯಕ್ಕೆ ಸಿಲುಕದೆ ಸಾಗಬೇಕಾದರೆ ಆತ್ಮಬೋಧನೆಯ ಅಗತ್ಯ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಗುರುವಿನ ಉಪದೇಶದಿಂದ ಆತ್ಮಪ್ರಕಾಶವಾಗುತ್ತದೆ, ನಿಷ್ಕಾಮವಾಗಿ ಗುರುವಿಗೆ ಶರಣಾಗಬೇಕೆಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ತಾಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದ ನಾದಸುಧಾರಸ ವೇದಿಕೆಯಲ್ಲಿ ಆತ್ಮಬೋಧಾಮೃತ ಪ್ರವಚನವನ್ನು ನೀಡಿದ ಅವರು, ಮಾನವ ಜನ್ಮದ ಮಹತ್ವವನ್ನು ಕೈವಾರ ತಾತಯ್ಯನವರು ತಮ್ಮ ತತ್ವಗಳಲ್ಲಿ ತಿಳಿಸಿದ್ದಾರೆ. ಸದಾಕಾಲ ಆತ್ಮದಲ್ಲಿ ಗುರುವಿನ ಚಿಂತನೆಯನ್ನು ಮಾಡಬೇಕು. ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡಬೇಕು ಎಂದರು.

ಪರಮಾತ್ಮನ ನಾಮಸ್ಮರಣೆ

ಇದರಿಂದ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ. ಅಂತರಂಗದಲ್ಲಿ ನಾಮಸ್ಮರಣೆಯ ನಿರಂತರವಾಗಿ ಮಾಡಬೇಕು. ಕಣ್ಣಿನ ಗುಡ್ಡೆಯನ್ನು ಕಣ್ಣಿನ ರೆಪ್ಪೆಗಳು ಹೇಗೆ ರಕ್ಷಿಸುತ್ತದೆಯೋ ಹಾಗೆ ಪರಮಾತ್ಮನ ನಾಮಸ್ಮರಣೆಯು ನಮ್ಮನ್ನು ರಕ್ಷಿಸುತ್ತದೆಯೆಂದರು.

ಹುಟ್ಟು ಸಾವುಗಳಿಂದ ಮುಕ್ತವಾಗುವಿಕೆಯೇ ಮೋಕ್ಷ. ಜ್ಞಾನವನ್ನು ಪಡೆದು ಬುದ್ಧಿಯಿಂದ ಚಿಂತನೆ ಮಾಡುವ ಕಾರಣ ಅನಂತಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಠ ಜೀವಿ. ಈ ಮಾನವನು ಆತ್ಮಚಿಂತನೆಯನ್ನು ನಡೆಸಿ, ಮಾಯೆಯ ಪೊರೆಯನ್ನು ಕಳಚಿದಾಗ ಮಾತ್ರ ಮೋಕ್ಷದ ಹಾದಿಯು ಕಾಣುತ್ತದೆ. ಮಾಯೆಯ ಪ್ರಾಬಲ್ಯಕ್ಕೆ ಸಿಲುಕದೆ ಸಾಗಬೇಕಾದರೆ ಆತ್ಮಬೋಧನೆಯ ಅಗತ್ಯತೆಯಿದೆ ಎಂದರು.

ಬಂಧನ- ಮೋಕ್ಷಕ್ಕೆ ಮನಸ್ಸೇ ಕಾರಣ

ಇದೊಂದು ಸಾಧನಾ ಪ್ರಕ್ರಿಯೆ. ಮಾನವರು ಅನಿತ್ಯವಾದ ಬಯಕೆಗಳ ಸಾಗರದಲ್ಲಿ ಮುಳುಗಿ, ನಿತ್ಯವಾದ ಆತ್ಮನನ್ನು ಮರೆಯುತ್ತಿದ್ದಾರೆ. ಅರ್ಥ ಮತ್ತು ಕಾಮವನ್ನು ಧರ್ಮದ ಚೌಕಟ್ಟಿನಲ್ಲಿ ಬಂಧಿಸಿರಬೇಕು. ಇದು ಪರಮಾತ್ಮನ ನಿಯಮ. ಈ ನಿಯಮವನ್ನು ಮೀರದೆ ಜೀವನ ನಡೆಸುವವರು ಮೋಕ್ಷಾರ್ಹರು. ಮನುಷ್ಯನಿಗೆ ಬಂಧಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ. ಪ್ರಾಪಂಚಿಕ ಭೋಗಚಿಂತನೆಯಲ್ಲಿ ಆಸಕ್ತವಾದರೆ ಮನಸ್ಸು ಬಂಧನವಾಗುತ್ತದೆ. ಭೋಗಚಿಂತನೆಯಿಂದ ಮುಕ್ತವಾದರೆ ಮನಸ್ಸು ಮುಕ್ತಿಗೆ ಕಾರಣವಾಗುತ್ತದೆ. ಆಸೆಯಿಂದ ಮಾನವನಿಗೆ ದು:ಖವು ಉಂಟಾಗುತ್ತದೆ. ದುರಾಸೆಯ ಕಾರಣ ಭಯವೂ ಒದಗಬಹುದು. ಯಾರು ಆಸೆಯಿಂದ ದೂರವಿರುವರೋ ಅವರಿಗೆ ಭಯವಾಗಲಿ, ದು:ಖವಾಗಲಿ ಇರುವುದಿಲ್ಲವೆಂದರು.

ಕಾರ್ಯಕ್ರಮಕ್ಕೂ ಮೊದಲು ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಶ್ರೀರಾಮಭವತಾರಕ ಮಂತ್ರ ಪಠಣೆಯನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು. ಭಕ್ತರಿಗೆ ತೀರ್ಥಪ್ರಸಾದವನ್ನು ವಿತರಿಸಲಾಯಿತು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ಆಧ್ಯಾತ್ಮ ಚಿಂತಕ ಕುರುಬೂರು ಮುನಿವೀರಭದ್ರಪ್ಪ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್‌ರನ್ನು ಸನ್ಮಾನಿಸಿದರು.

ಶ್ರೀಯೋಗಿನಾರೇಯಣ ಟ್ರಸ್ಟ್ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಸದಸ್ಯರುಗಳಾದ ಕೆ.ನರಸಿಂಹಪ್ಪ, ಕೆ.ಎಂ.ತ್ಯಾಗರಾಜ್ ಹಾಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

ಚಿಂತಾಮಣಿ ತಾಲೂಕಿನ ಶ್ರೀಕ್ಷೇತ್ರ ಕೈವಾರ ಮಠದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಆತ್ಮಬೋಧಾಮೃತ ಪ್ರವಚನ ನೀಡಿದರು.