ಸತ್ಸಂಗದಿಂದ ಆತ್ಮೋದ್ಧಾರ: ರಾಮನಗೌಡರ

| Published : Feb 08 2025, 12:30 AM IST

ಸಾರಾಂಶ

ಯೋಗವಾಸಿಷ್ಠವು ಆರು ಪ್ರಕರಣಗಳನ್ನು ಹೊಂದಿದ್ದು, ವಾಸಿಷ್ಠರು ಶ್ರೀರಾಮನ 42 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ನೀಡಿದ ಉತ್ತರಗಳನ್ನು ಒಳಗೊಂಡಿದೆ. ಬಹಿರ್ಮುಖವಾಗಿರುವ ಮನಸ್ಸನ್ನು ಒಮ್ಮುಖಗೊಳಿಸಿ ಮುಕ್ತಿ ಪಡೆಯುವ ಮಾರ್ಗ, ಅಜ್ಞಾನ ಎಂಬ ಕತ್ತಲೆ ಕಳೆದು ಮಾನವ ಜನ್ಮ ಸಾರ್ಥಕಗೊಳಿಸಿಕೊಳ್ಳುವ ಮೂಲಕ ಪರಮ ಸುಖದ ಮಾರ್ಗವನ್ನು ಯೋಗವಾಸಿಷ್ಠದಲ್ಲಿ ತಿಳಿಸಲಾಗಿದೆ.

ಧಾರವಾಡ:

ಆತ್ಮ ಸಾಕ್ಷಾತ್ಕಾರಕ್ಕೆ ಭಾವ ಶುದ್ಧಿ ಅಗತ್ಯ. ಸತ್ಸಂಗದಿಂದ ಆತ್ಮೋದ್ಧಾರವಾಗುತ್ತದೆ ಎಂದು ಹಿರಿಯ ವೈದ್ಯ ಡಾ. ಎಸ್.ಆರ್. ರಾಮನಗೌಡರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಬಸಯ್ಯ ಶಿವಯ್ಯ ಶಿರೋಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ಯೋಗವಾಸಿಷ್ಠ’ ವಿಷಯ ಕುರಿತು ಮಾತನಾಡಿದರು. ಯೋಗವಾಸಿಷ್ಠವು ಆರು ಪ್ರಕರಣಗಳನ್ನು ಹೊಂದಿದ್ದು, ವಾಸಿಷ್ಠರು ಶ್ರೀರಾಮನ 42 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ನೀಡಿದ ಉತ್ತರಗಳನ್ನು ಒಳಗೊಂಡಿದೆ. ಬಹಿರ್ಮುಖವಾಗಿರುವ ಮನಸ್ಸನ್ನು ಒಮ್ಮುಖಗೊಳಿಸಿ ಮುಕ್ತಿ ಪಡೆಯುವ ಮಾರ್ಗ, ಅಜ್ಞಾನ ಎಂಬ ಕತ್ತಲೆ ಕಳೆದು ಮಾನವ ಜನ್ಮ ಸಾರ್ಥಕಗೊಳಿಸಿಕೊಳ್ಳುವ ಮೂಲಕ ಪರಮ ಸುಖದ ಮಾರ್ಗವನ್ನು ಯೋಗವಾಸಿಷ್ಠದಲ್ಲಿ ತಿಳಿಸಲಾಗಿದೆ. ಮನುಷ್ಯ ಜೀವನದ ಪರಿಪೂರ್ಣ ಬದುಕಿಗೆ ಈ ಗ್ರಂಥ ಸಹಕಾರಿಯಾಗಲಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನರೇಗಲ್‌ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ, ಕಾಶಿ ಮೊದಲ ವಿದ್ಯಾ ಕೇಂದ್ರವಾದರೆ ಧಾರವಾಡ ಎರಡನೆಯದು. ಇಂದಿನ ಸಂಸಾರ ಜಂಜಾಟದಿಂದ ಗ್ರಂಥ ಓದಲು ಸಾಧ್ಯವಾಗದಿದ್ದರೆ ಇಂಥ ಉಪನ್ಯಾಸ ಕೇಳಿ ಸಾರ್ಥಕ ಬದುಕು ನಿಮ್ಮದಾಗಬೇಕು ಎಂದರು.

ಪ್ರೊ. ಬಸಯ್ಯ ಶಿರೋಳ ಇದ್ದರು. ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಬಸವರಾಜ ಕೌಜಲಗಿ ಪರಿಚಯಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡಿನ ವಂದಿಸಿದರು.