ಸ್ವಾವಲಂಬನೆಯಿಂದ ಮೌಲ್ಯ ಉಳಿಯಲು ಸಾಧ್ಯ: ಡಾ. ಬಸವ ಮರುಳಸಿದ್ದ ಸ್ವಾಮೀಜಿ

| Published : Jun 30 2024, 12:48 AM IST

ಸ್ವಾವಲಂಬನೆಯಿಂದ ಮೌಲ್ಯ ಉಳಿಯಲು ಸಾಧ್ಯ: ಡಾ. ಬಸವ ಮರುಳಸಿದ್ದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸ್ವಾರ್ಥ, ಪ್ರತಿಷ್ಠೆಗಳಿಂದ ಸಾಮಾಜಿಕ ಆರೋಗ್ಯ, ವ್ಯಕ್ತಿಗತ ನೆಮ್ಮದಿಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡದೆ ಇದ್ದರೆ ಮೌಲ್ಯಗಳು ಉಳಿಯಲು ಸಾಧ್ಯವಿಲ್ಲ ಎಂದು ಬಸವ ತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಬಸವ ಮಂದಿರದಲ್ಲಿ ಶಿವಾನುಭವಗೋಷ್ಠಿ, ನೂತನ ಜನಪ್ರತಿನಿಧಿಗಳಿಗೆ ಅಭಿನಂದನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸ್ವಾರ್ಥ, ಪ್ರತಿಷ್ಠೆಗಳಿಂದ ಸಾಮಾಜಿಕ ಆರೋಗ್ಯ, ವ್ಯಕ್ತಿಗತ ನೆಮ್ಮದಿಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡದೆ ಇದ್ದರೆ ಮೌಲ್ಯಗಳು ಉಳಿಯಲು ಸಾಧ್ಯವಿಲ್ಲ ಎಂದು ಬಸವ ತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು. ಕಲ್ಯಾಣ ನಗರದ ಬಸವ ಮಂದಿರದಲ್ಲಿ ಏರ್ಪಡಿಸಿದ್ದ ಶಿವಾನುಭವಗೋಷ್ಠಿ, ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಭಿನಂದನೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮೌಲ್ಯಗಳನ್ನು ಸರಿಯಾಗಿ ರಕ್ಷಿಸಿಕೊಳ್ಳದಿದ್ದರೆ ಏನಾಗಬಹುದು ಎಂಬುದಕ್ಕೆ ಇಂದು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಮೌಲ್ಯಗಳಿಗೆ ಮಾದರಿಯಾಗಬೇಕಿದ್ದವರು ಅವುಗಳನ್ನು ಗಾಳಿಗೆ ತೂರಿ ಮೆರೆಯುತ್ತಿದ್ದಾರೆ ಎಂದು ವಿಷಾಧಿಸಿದರು.

ಉನ್ನತ ಸ್ಥಾನಮಾನದಲ್ಲಿ ಇದ್ದವರಿಂದಲೇ ಸಮಾಜಕ್ಕೆ ಅಪಾಯಕಾರಿಯಾಗಿರುವುದು ಇಂದು ನಡೆಯುತ್ತಿರುವ ದುರಂತಕ್ಕೆ ಪ್ರಮುಖ ಕಾರಣ. ಬಹುಪಾಲು ಮೌಲ್ಯಗಳ ಹರಣ ಮಾಡುತ್ತಿದ್ದಾರೆ. ಸ್ವಾರ್ಥ, ಪ್ರತಿಷ್ಠೆಗಳಿಗಿಂತಲೂ ಜೀವನ ಬಹಳ ದೊಡ್ಡದು ಎಂದು ಅರಿತು ಬಾಳಬೇಕಾಗಿದೆ ಎಂದು ಕರೆ ನೀಡಿದರು.

ಮಹಾಭಾರತದಲ್ಲಿ ವಸ್ತ್ರಾಪಹರಣ ನಡೆಯಿತು, ಈಗ ಮಾನಾಪಹರಣ ನಡೆಯುತ್ತಿದೆ, ಅತ್ಯಾಚಾರ, ಅನಾಚಾರಗಳಿಗೆ ಬದಲಾಗಿ ಶರಣರ ಪಂಚಾಚಾರಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ರಂಗಗಳಲ್ಲಿಯೂ ಭ್ರಷ್ಟರೇ ಕುಳಿತರೆ ಮೌಲ್ಯ ಗಳಿಗೆ ಮಾದರಿಯಾಗುವವರು ಯಾರು ಎಂದು ಪ್ರಶ್ನಿಸಿದರು.

ಕುಟುಂಬದಲ್ಲಿ ಮೌಲ್ಯಗಳ ಜಾಗೃತಿಯಾಗದೆ ಸಮಾಜದಲ್ಲಿ ಅದು ಸಾಧ್ಯವಾಗದು. ತನ್ನ ವೈಯಕ್ತಿಕ ಮೌಲ್ಯದ ರೂಪ ಧಾರಣೆಯಾಗುವುದು ನನ್ನ ಮನಸ್ಸಿನಿಂದ, ನನ್ನಿಂದಲೇ ಎಂಬುದನ್ನು ಬಿಟ್ಟು ಸರ್ಕಾರ ನಿಯಮ ಮಾಡಿದರೆ ಮೌಲ್ಯ ಗಳನ್ನು ನಾವೇ ರೂಪಿಸಿಕೊಳ್ಳಬೇಕು. ಮನಸ್ಸು ಎಚ್ಚರಿಸದ ಮೌಲ್ಯಗಳು ಮೌಲ್ಯಗಳೇ ಅಲ್ಲ ಎಂದರು.

ಇಂದು ಮಾದರಿಯಾಗಬಲ್ಲ ವ್ಯಕ್ತಿತ್ವಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಶ್ರೀಗಳು ಸರಿದಾರಿಯನ್ನು ದಿಗ್ದರ್ಶಿಸುವವನೇ ನಾಯಕ. ಸತ್ಯ, ನ್ಯಾಯ ಮತ್ತು ಶ್ರಮದ ಮೌಲ್ಯಗಳು ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುತ್ತವೆ. ದುಷ್ಟರಿಂದ ದೇಶ ಕುಲಗೆಡುತ್ತಿಲ್ಲ ಅವರ ವಿರುದ್ಧ ಸತ್ಯ ಹೇಳಲಿಕ್ಕೆ ಆಗದ ಶಿಷ್ಟರಿಂದ ದೇಶ ಹಾಳಾಗುತ್ತಿದೆ ಎಂದು ಪ್ರತಿಪಾದಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾಡಿನ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಜೊತೆಗೆ, ಅನೇಕ ವಿಚಾರಗಳ ಮೂಲಕ ಪ್ರಬುದ್ಧತೆ ಎತ್ತಿ ಹಿಡಿಯುವ ಕೆಲಸ ಮಾಡಿ ನಾಡಿಗೆ ಬೆಳಕಾಗುವಂತೆ ಬಸವ ಮಂದಿರ ಶ್ರೀ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಗುರುಮಠಗಳ ಮತ್ತು ಗುರುಗಳ ಆಶೀರ್ವಾದ ಸದಾ ನಮಗೆ ಸಮಾಜಕ್ಕೆ ಬೇಕಾಗುತ್ತದೆ. ಗುರುಗಳು ಸಮಾಜವನ್ನು ತಿದ್ದಿ, ತೀಡಿ ಉತ್ತಮ ಕಾರ್ಯ ಮಾಡುತ್ತಿವೆ. ಶ್ರೀಗಳು ಭಕ್ತರನ್ನು ಸಮಯೋಚಿತವಾಗಿ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಇಂದು ಸಮಾಜದಲ್ಲಿ ಸ್ವಾರ್ಥ- ಪ್ರತಿಷ್ಠೆಯಿಂದಾಗಿ ನೆಮ್ಮದಿ ಬದುಕು ಮರೀಚಿಕೆಯಾಗಿದೆ. ಕೃಷಿಯಿಂದ ಸ್ವಾಸ್ಥ್ಯ ಸಮಾಜ ಕಟ್ಟಿ ಬೆಳೆಸಿದ್ದಾರೆ. ನಮ್ಮ ಹಿರಿಯರು ಇಂದು ಮಕ್ಕಳು ಕೃಷಿ ಬದುಕಿನಿಂದ ದೂರ ಉಳಿಯುತ್ತಿರುವುದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಬುದ್ಧಿ ಮುಕ್ಕಾಲು ವಿದ್ಯೆ ಒಕ್ಕಾಲು ಆದರೆ ಎಲ್ಲಿಯೂ ಬದುಕಿ ಬರುತ್ತಾರೆ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ ನಿಂತಾಗ ಅಷ್ಟೇ ಗಟ್ಟಿಯಾಗುತ್ತೇವೆ, ಕಷ್ಟವನ್ನು ಎದುರಿಸ ದಿದ್ದರೆ ಗಟ್ಟಿಗೆ ಅವಕಾಶ ಸಿಗುವುದಿಲ್ಲ ಎಂದು ತಿಳಿಸಿದರು.

ದೇವರು ಒಂದಲ್ಲ ಒಂದು ಅವಕಾಶ ಸೃಷ್ಟಿ ಮಾಡಿರುತ್ತಾನೆ. ಹೀಗಾಗಿ ಒಂದು ಅವಕಾಶ ತಪ್ಪಿತು ಅಂತ ಜೀವನ ಮುಗಿದು ಹೋಯಿತು ಎಂದು ಭಾವಿಸಬೇಡಿ. ಹೊಸತನ ಮೈಗೂಡಿಸಿಕೊಂಡು ಸಾಧನೆ ಮಾಡಿದ ಎಪಿಜೆ ಅಬ್ದುಲ್ ಕಲಾಂ ಜೀವನ ಸ್ಮರಿಸಿ, ದೇವರು ಹುಟ್ಟು ಸಾವು ಎರಡನ್ನು ಮಾತ್ರ ಬರೆಯುತ್ತಾನೆ ಎಂದು ಹೇಳಿದರು.

ಪತ್ರಕರ್ತ ಡಾ. ವೆಂಕಟೇಶ್ ಸಾಮಾಜಿಕ ಜೀವನ ಮತ್ತು ಮೌಲ್ಯ ಪ್ರಜ್ಞೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಡೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಓಂಕಾರಪ್ಪ, ಚಿದಾನಂದ, ಚಂದ್ರಶೇಖರ್, ಮಲ್ಲೇಗೌಡ ಇದ್ದರು.ಪೋಟೋ ಫೈಲ್ ನೇಮ್‌ 29 ಕೆಸಿಕೆಎಂ 2ಚಿಕ್ಕಮಗಳೂರಿನ ಬಸವಮಂದಿರದಲ್ಲಿ ನಡೆದ ಶಿವಾನುಭವಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯರಾದ ಎಸ್‌.ಎಲ್‌. ಭೋಜೇಗೌಡ ಹಾಗೂ ಸಿ.ಟಿ. ರವಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಎಸ್‌. ಓಂಕಾರಪ್ಪ, ಚಿದಾನಂದ, ಚಂದ್ರಶೇಖರ್‌ ಇದ್ದರು.