ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಾವಲಂಬನೆ

| Published : Dec 18 2023, 02:00 AM IST

ಸಾರಾಂಶ

ನಮ್ಮ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಯ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾಡುತ್ತಾ ಬಂದಿದ್ದಾರೆ. ಮಹಿಳೆಯರಲ್ಲಿ ಸಂಘಟನಾ ಮನೋಭಾವ ಬೆಳೆಸುವ ಜತೆಗೆ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವಲ್ಲಿ ಇವರ ಪಾತ್ರ ಮಹತ್ವದ್ದು.

ಕನ್ನಡಪ್ರಭ ವಾರ್ತೆ ಕುಮಟಾ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದಿರುವಷ್ಟು ಸಮಾಜಮುಖಿ ಕಾರ್ಯಕ್ರಮಗಳು ಇನ್ನಾವುದೇ ಸಂಘ ಸಂಸ್ಥೆಗಳಿಂದ ನಡೆದಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗೋಕರ್ಣ ವಲಯದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ನೆಲಗುಣಿಯ ಶ್ರೀಗಂಗಾ ವಿಶ್ವೇಶ್ವರ ಸಭಾಭವನದಲ್ಲಿ ಜರುಗಿದ ಸಾಧನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಮ್ಮ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಯ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾಡುತ್ತಾ ಬಂದಿದ್ದಾರೆ. ಮಹಿಳೆಯರಲ್ಲಿ ಸಂಘಟನಾ ಮನೋಭಾವ ಬೆಳೆಸುವ ಜತೆಗೆ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವಲ್ಲಿ ಇವರ ಪಾತ್ರ ಮಹತ್ವದ್ದು. ಸ್ವ ಉದ್ಯೋಗಕ್ಕೆ ಪೂರಕವಾಗಿ ಸಾಲಸೌಲಭ್ಯ ಒದಗಿಸುವುದು, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಮದ್ಯವರ್ಜನಾ ಶಿಬಿರ, ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಸ್ತುತ್ಯರ್ಹವಾಗಿದೆ ಎಂದರು.

ಸಮಾವೇಶಕ್ಕೆ ಮುನ್ನ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಗೋಕರ್ಣ ವಲಯದ ಅಧ್ಯಕ್ಷ ಮಹೇಶ ಜಿ. ಶೆಟ್ಟಿ ಮುಂದಾಳತ್ವದಲ್ಲಿ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ನಿರ್ದೇಶಕ ಮಹೇಶ ಎಂ.ಡಿ., ಯೋಜನಾಧಿಕಾರಿ ಶಶಿರೇಖಾ, ನಿವೃತ್ತ ಆರೋಗ್ಯಾಧಿಕಾರಿ ಸಿ.ಡಿ.ನಾಯ್ಕ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಮಾಜಿ ಅಧ್ಯಕ್ಷೆ ಭಾರತಿ ಗೌಡ, ಗ್ರಾಪಂ. ಸದಸ್ಯರಾದ ರಮೇಶ ಪ್ರಸಾದ, ದಯಾ ಮೆಹತಾ, ರಾಜೇಶ ನಾಯಕ ಇನ್ನಿತರರು ಇದ್ದರು.