ಆತ್ಮಗೌರವವೆ ಕಾಂಗ್ರೆಸ್‌ ಧ್ಯೇಯ: ಸಚಿವ ಈಶ್ವರ ಖಂಡ್ರೆ

| Published : May 01 2024, 01:22 AM IST / Updated: May 01 2024, 01:23 AM IST

ಸಾರಾಂಶ

ಸಮಾಜದ ಉಳಿವಿಗಾಗಿ, ಸಂವಿಧಾನದ ಸಂರಕ್ಷಣೆಗಾಗಿ ಕಾಂಗ್ರೆಸ್‌ ಗೆಲ್ಲಿಸುವಂತೆ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ಮನವಿ ಮಾಡಿದರು. ನಗರದಲ್ಲಿ ದಲಿತ ಸಂರಕ್ಷಣಾ ಸಮಿತಿಗಳ ಐಕ್ಯ ಹೋರಾಟ ಸಮಿತಿ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ, ಬೀದರ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್

ಸಮ ಸಮಾಜ ಸಾಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಎಲ್ಲರೂ ಆತ್ಮಗೌರವದಿಂದ ಬದುಕಬೇಕೆಂಬುದು ಕಾಂಗ್ರೆಸ್ ಧ್ಯೇಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ದಲಿತ ಸಂರಕ್ಷಣಾ ಸಮಿತಿಗಳ ಐಕ್ಯ ಹೋರಾಟ ಸಮಿತಿ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ, ಬೀದರ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರು 12ನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡಿದ್ದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಮೀಸಲಾತಿ ಜಾರಿಯ ಮೂಲಕ ವಂಚಿತರಿಗೆ, ಶೋಷಿತರಿಗೆ, ದಮನಿತರಿಗೆ, ದಲಿತರಿಗೆ ಸಾಮಾಜಿಕ ನ್ಯಾಯ ನೀಡುವ ಕಾರ್ಯ ಮಾಡಿತು ಎಂದರು.

ಇಂದು ಅಂಬೇಡ್ಕರ್ ನೀಡಿದ ಸಂವಿಧಾನವೇ ಅಪಾಯದಲ್ಲಿದೆ. ಬಿಜೆಪಿ ಸರ್ಕಾರ ಸಂವಿಧಾನವನ್ನೇ ಬದಲಾಯಿಸುವ ಮಾತನಾಡುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡೇ ಮಾಡುತ್ತದೆ. ಈಗಾಗಲೇ ಜನ ಭಯಭೀತಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ದಿನಗಳನ್ನು ಊಹಿಸಿಕೊಳ್ಳುವುದೂ ಕಷ್ಟವಾಗುತ್ತದೆ ಎಂದರು.

ಬಿಜೆಪಿಯವರು ದೇಶದ ಅಭಿವೃದ್ಧಿ ಮಾಡದೆ, ಒಡೆದಾಳುವ ತಂತ್ರ ಅನುಸರಿಸುತ್ತಿದ್ದಾರೆ. ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ, ಧರ್ಮ-ಧರ್ಮಗಳ ನಡುವೆ ಒಡಕು ಮೂಡಿಸುತ್ತಿದ್ದಾರೆ. ಸಮಾಜದ ಉಳಿವಿಗಾಗಿ ಮತ್ತು ಸಂವಿಧಾನದ ಸಂರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನ ಜಾರಿಗೆ ತರುವ ಮೂಲಕ ಬಡವರ ಪರವಾಗಿ ನಿಂತಿದೆ. 1.10 ಕೋಟಿ ಜನರನ್ನು ಕಳೆದ 10 ತಿಂಗಳ ಅವಧಿಯಲ್ಲಿ ಬಡತನ ರೇಖೆಯಿಂದ ಮೇಲೆತ್ತಿದೆ ಎಂದರು.

ಈ ಕ್ಷೇತ್ರದ ಹಾಲಿ ಸಂಸತ್ ಸದಸ್ಯ ಭಗವಂತ ಖೂಬಾ, ಜಿಲ್ಲೆಗಾಗಲೀ, ಕ್ಷೇತ್ರಕ್ಕಾಗಲೀ ಯಾವುದೇ ಕೊಡುಗೆ ನೀಡಿಲ್ಲ. ಯಾರನ್ನೂ ಕೇಳಿದರೂ ಸಂಸದರು ತಮ್ಮ ಕ್ಷೇತ್ರಕ್ಕೆ ಬಂದಿಲ್ಲ ಎನ್ನುತ್ತಾರೆ. ಅವರ ಕೊಡುಗೆ ಏನು ಎಂದರೆ ಶೂನ್ಯ ಎನ್ನುತ್ತಾರೆ. ಹೀಗಾಗಿ ನಮ್ಮ ಜಿಲ್ಲೆಯ ಮತ್ತು ರಾಜ್ಯದ ಧ್ವನಿಯಾಗುವ ಸಾಗರ್ ಈಶ್ವರ ಖಂಡ್ರೆಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದರು.

ಸಚಿವ ರಹೀಂ ಖಾನ್ ಮಾತನಾಡಿ, ಪ್ರತಿಯೊಂದು ಮತವೂ ಅತ್ಯಮೂಲ್ಯ. ಎಲ್ಲ ಜಾತಿ, ಜನಾಂಗದವರೂ ಈ ಬಾರಿ ರಾಜ್ಯದ ಹಿತಕ್ಕಾಗಿ, ರಾಷ್ಟ್ರದ ಹಿತಕ್ಕಾಗಿ ಮತ್ತು ಬೀದರ್ ಒಳಿತಿಗಾಗಿ ಸಾಗರ್ ಈಶ್ವರ ಖಂಡ್ರೆಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಮನ್ನಾನ್ ಸೇಠ್, ಅಮೃತರಾವ್ ಚಿಮ್ಕೋಡ್ ಮತ್ತಿತರರು ಉಪಸ್ಥಿತರಿದ್ದರು.