ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ವತಿಯಿಂದ ಪರಿಷತ್ತಿನ ಸಾಧಕರಿಗೆ ಸನ್ಮಾನ ಸಮಾರಂಭ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆಯಿತು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ವತಿಯಿಂದ ಪರಿಷತ್ತಿನ ಸಾಧಕರಿಗೆ ಸನ್ಮಾನ ಸಮಾರಂಭ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆಯಿತು.

ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಇತ್ತೀಚೆಗೆ ವಿಶುಕುಮಾರ ಪ್ರಶಸ್ತಿಗೆ ಭಾಜನರಾದ ಬೆನೆಟ್ ಅಮ್ಮನ್ನ, ಮುಂಬಯಿ ಮಹಿಳೆಯರ ಬಗ್ಗೆ ಪುಸ್ತಕ ಬರೆದು ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಾಹಿತಿ ಸುಖಲಾಕ್ಷಿ ವೈ. ಸುವರ್ಣ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಹಲವು ಪ್ರಶಸ್ತಿ ಪುರಸ್ಕೃತರೂ, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯತನದ ಅಭಿಯಾನದಲ್ಲಿ ನೂರಕ್ಕೂ ಅಧಿಕ ಸದಸ್ಯರನ್ನು ನೋಂದಣಿ ಮಾಡಿಸಿ ಜನಜನಿತರೂ ಆದ ಇಸ್ಮಾಯಿಲ್ ಬಬ್ಬುಕಟ್ಟೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅರೆಹೊಳೆ ಸದಾಶಿವರಾಯರು ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಪರಿಷತ್ತಿನ ಒಳಗಿನ ಸಾಧಕರನ್ನೇ ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಂಭ್ರಮಾಚರಣೆ ಮನೆಯೊಳಗಿನಿಂದಲೇ ಆದರೆ ಅದು ಹೆಚ್ಚು ಆಪ್ತವೂ ಅರ್ಥಪೂರ್ಣವೂ ಆಗುತ್ತದೆ. ಮತ್ತಷ್ಟು ಸಾಧಿಸಲು ಪ್ರೇರಣೆಯಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಡಾ. ಮಂಜುನಾಥ ರೇವಣ್‌ಕರ್‌ ಸಾಧಕರನ್ನು ಅಭಿನಂದಿಸಿದರು. ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಮುರಲೀಮೋಹನ ಚೂಂತಾರು ಅವರು ಸನ್ಮಾನಿತರನ್ನು ಪರಿಚಯಿಸಿದರು.

ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ ಸ್ವಾಗತಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್‌ ನಿರೂಪಿಸಿದರು. ಉಷಾ ಪ್ರಾರ್ಥಿಸಿದರು. ಪರಿಷತ್ತಿನ ಸದಸ್ಯರಾದ ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಕೃಷ್ಣಪ್ಪ ಗೌಡ, ತಿರುಮಲೇಶ್ವರ ಭಟ್, ನಿಜಗುಣ ದೊಡ್ಡಮನಿ, ಮುರಳೀಧರ ಭಾರದ್ವಾಜ್, ಸಾಹಿತಿ ಚಂದ್ರಶೇಖರ ದೈತೋಟ, ವಿಘ್ನೇಶ್ ಭಿಡೆ, ರವೀಂದ್ರನಾಥ ಕೆ.ವಿ., ಅರುಣ್ ಮಾನ್ವಿ, ಸುಮಾ‌ಮಾನ್ವಿ, ಅನಿತಾ ಶೆಣೈ, ಆಕೃತಿ ಭಟ್‌ ಮತ್ತಿತರರಿದ್ದರು.