ಸಂಸ್ಕಾರ ಬಲದಿಂದ ಆತ್ಮಬಲ ವೃದ್ಧಿ: ರಮೇಶ ಸಂಗಾ

| Published : Dec 18 2024, 12:46 AM IST

ಸಾರಾಂಶ

ಬಸವ ತತ್ವ, ಗುರು ತತ್ವ ಅರಿಯಬೇಕು. ಧಾರ್ಮಿಕ, ಆಧ್ಯಾತ್ಮಿಕತೆ ಒಲವು ಹೆಚ್ಚಿಸಿಕೊಳ್ಳಬೇಕು. ಮಕ್ಕಳಿಗೆ ಆರಂಭಿಕ ಬದುಕಿನಲ್ಲಿ ಸಂಸ್ಕಾರ ಹೇಳಿಕೊಡಬೇಕು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಮನುಷ್ಯನಿಗೆ ಹಣ, ಅಧಿಕಾರ, ಅಂತಸ್ತುಗಳ ಸುಖಕ್ಕಿಂತ ಉತ್ತಮ ಸಂಸ್ಕಾರದ ಬಲ ಅತ್ಯಗತ್ಯ. ಯಾಕೆಂದರೆ ಮನುಷ್ಯನ ನೆಮ್ಮದಿಯುತ ಬದುಕಿಗೆ ಬಸವತತ್ವ, ಗುರುತತ್ವ , ಶರಣ ತತ್ವಗಳಂತಹ ಸಂಸ್ಕಾರ ಬಲದಿಂದ ಆತ್ಮಬಲ ವೃದ್ಧಿಯಾಗುತ್ತದೆ ಎಂದು ಬೆಂಗಳೂರಿನ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರ ಸಂಘದ ಅಧ್ಯಕ್ಷ ರಮೇಶ ಸಂಗಾ ಹೇಳಿದರು.

ಪಟ್ಟಣದಲ್ಲಿ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ಪುಣ್ಯಾರಾಧನೆ ಮತ್ತು ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ನಡೆದಿರುವ 30ದಿನಗಳ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದು ಜಗತ್ತಿನಲ್ಲಿ ಸಾಕಷ್ಟು ಜನ ಹಣವಂತರು, ಅಧಿಕಾರವಂತರಾಗಿದ್ದಾರೆ. ನಿತ್ಯ ಹಣ, ಅಧಿಕಾರದ ಬೆನ್ನು ಹತ್ತಿದ್ದಾರೆ. ಆದರೆ ಮಾನವೀಯತೆ ಹಿನ್ನೆಲೆ ಸಂಸ್ಕಾರಯುತ ಬದುಕಿನತ್ತ ಮುಖಮಾಡುತ್ತಿಲ್ಲ. ಹೀಗಾಗಿ ಸಂಕಷ್ಟ ಎದುರಿಸುತ್ತ ನೆಮ್ಮದಿ ಕಳೆದುಕೊಂಡಿದ್ದಾರೆ. ಅವರಿಗೆ ಸುಖವಿಲ್ಲ, ನೆಮ್ಮದಿಯಿಲ್ಲ, ನಿದ್ರೆಯಂತೂ ಇಲ್ಲವೇ ಇಲ್ಲ. ಮನುಷ್ಯ ಸಂಸ್ಕಾರಯುತ ಬದುಕು ಪ್ರೀತಿಸಬೇಕು. ಬಸವ ತತ್ವ, ಗುರು ತತ್ವ ಅರಿಯಬೇಕು. ಧಾರ್ಮಿಕ, ಆಧ್ಯಾತ್ಮಿಕತೆ ಒಲವು ಹೆಚ್ಚಿಸಿಕೊಳ್ಳಬೇಕು. ಮಕ್ಕಳಿಗೆ ಆರಂಭಿಕ ಬದುಕಿನಲ್ಲಿ ಸಂಸ್ಕಾರ ಹೇಳಿಕೊಡಬೇಕು. ಅಂದಾಗ ಅವರು ಉತ್ತಮ ವ್ಯಕ್ತಿತ್ವ, ಸುಸಂಸ್ಕೃತ ಬದುಕು ರೂಪಿಸಿಕೊಳ್ಳಲು ಸಹಕಾರಿ ಎಂದು ಬೆಂಗಳೂರಿನ ವಕೀಲ ವೃತ್ತಿ ಕುಟುಂಬವೊಂದರ ಅಸ್ಥಿರ, ನೆಮ್ಮದಿರಹಿತ ಬದುಕಿನ ಚಿತ್ರಣ ಉದಾಹರಣೆಯಾಗಿ ನೀಡಿದರು.

ತಿಂಗಳ ಪರ್ಯಂತ ಪ್ರವಚನ ನೀಡಿದ ನಿಜಗುಣಾನಂದ ಶ್ರೀಗಳು ಸಮಾರೋಪದ ನುಡಿಗಳನ್ನಾಡಿ, ಭಾರತ ಅತಿದೊಡ್ಡ ಪಾರಂಪರಿಕ ದೇಶ. ಇಲ್ಲಿನ ನೆಮ್ಮದಿಯುತ ಬದುಕಿಗೆ ಧಾರ್ಮಿಕ ಪರಂಪರೆ ಕಾರಣ. ಅದರಲ್ಲಿಯು ಕರ್ನಾಟಕದ ಮಠಗಳ ಪಾತ್ರ ಅತಿ ಮುಖ್ಯವಾಗಿದೆ. ಮಠಗಳು ಕರ್ನಾಟಕದಲ್ಲಿ ಮಾನವನ ಸಂಸ್ಕಾರಯುತ ಆತ್ಮ, ಧಾರ್ಮಿಕ, ನೈತಿಕ, ವಿದ್ಯಾಬಲ ಹೆಚವ್ಚಿಸಿವೆ. ಈ ಪರಂಪರೆ ದೇಶದ ಮತ್ತಾವ ರಾಜ್ಯದಲ್ಲಿ ಇಲ್ಲ ಎಂದರು.

ಫಕೀರೇಶ್ವರ ಸಂಸ್ಥಾನಮಠ ಫಕೀರ ಸಿದ್ದರಾಮ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಮನುಷ್ಯ ಜನ್ಮಕ್ಕೆ ಗುರುವಿನ ಸಾಮಿಪ್ಯ, ಉಪದೇಶ, ಅಶೀರ್ವಾದ ಬೇಕೇ ಬೇಕು. ಗುರುವಿನ ಆರ್ಶಿವಾದ ಪಡೆಯುವಲ್ಲಿ ಶಿಷ್ಯನಿಗೆ ಅಷ್ಟೇ ತಾಳ್ಮೆಯೂ ಬೇಕು. ಅಂದಾಗ ಶಿಷ್ಯನ ಬದುಕು ಆದರ್ಶಯುತವಾಗುತ್ತದೆ. ಗುರುಶಿಷ್ಯರ ಸಂಬಂಧ ನೋಡಬೇಕೆಂದರೆ ಗುಳೇದಗುಡ್ಡದ ಗುರುಸಿದ್ದೇಶ್ವರ ಮಠಕ್ಕೆ ಬರಬೇಕು ಎಂದರು. ಗುರುಸಿದ್ದೇಶ್ವರ ಬೃಹ್ಮಠದ ಬಸವರಾಜ ಶ್ರೀಗಳು, ಗುರು ಬಸವ ದೇವರು, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ವೇದಿಕೆಯಲ್ಲಿದ್ದರು. ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಜಿ.ಬಿರಾದಾರ ಇದ್ದರು.