ಒತ್ತಡದ ನಡುವೆ ಆಟೋಟದಿಂದ ಸಂತೋಷ: ವಸಂತ ಸಾಲಿಯಾನ

| Published : Feb 04 2024, 01:37 AM IST

ಸಾರಾಂಶ

ನಮ್ಮ ನಿತ್ಯ ಕೌಟುಂಬಿಕ ಒತ್ತಡಗಳ ನಡುವೆಯೂ ಎಲ್ಲರೂ ಕೂಡಿ ಆಟೋಟಗಳಲ್ಲಿ ಪಾಲ್ಗೊಂಡು ಸಂತೋಷದಿಂದಿರುವ ಅಗತ್ಯವಿದೆ.

ಬೆಳಗಾಲಪೇಟೆಯಲ್ಲಿ ಮಹಿಳಾ ಸ್ವಸಹಾಯ ಸಂಘದಿಂದ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸಾರ್ಥಕ ಜೀವನಕ್ಕೆ ಸದಾ ಒಳಿತಿನತ್ತ ಸಾಗುವ ಅಗತ್ಯ ಇಂದಿನದಾಗಿದ್ದು, ನಮ್ಮ ನಿತ್ಯ ಕೌಟುಂಬಿಕ ಒತ್ತಡಗಳ ನಡುವೆಯೂ ಎಲ್ಲರೂ ಕೂಡಿ ಆಟೋಟಗಳಲ್ಲಿ ಪಾಲ್ಗೊಂಡು ಸಂತೋಷದಿಂದಿರುವ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ ಹೇಳಿದರು.

ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾಲಪೇಟೆ ವಲಯ ಮಟ್ಟದ ಮಹಿಳಾ ಸ್ವಸಾಯ ಸಂಘಗಳ ಸದಸ್ಯರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನಲ್ಲಿ ಒತ್ತಡಗಳು ಸದಾ ಕಾಡುತ್ತಲೇ ಇರುತ್ತವೆ. ಅವುಗಳನ್ನು ನಿವಾರಿಸಿಕೊಂಡು ಸಾಂಸ್ಕೃತಿಕ ಸಾಮಾಜಿಕ ವಲಯದಲ್ಲಿ ಸಂತೋಷದಿಂದ ಬದುಕುವುದು ಮುಖ್ಯವಾಗಿದೆ. ಒಬ್ಬರಿಗೊಬ್ಬರು ಕೊಡುಕೊಳ್ಳುವಿಕೆ ಮೂಲಕ, ಇತರರ ಸಂತೋಷ ದುಃಖದಲ್ಲಿಯೂ ಪಾಲ್ಗೊಂಡು ಒಂದೇ ಕುಟುಂಬದವರಂತೆ ಬದುಕಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ಇಂತಹ ವಿಶೇಷ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಎಲ್ಲರೂ ಕೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅತ್ಯಂತ ಮುಖ್ಯ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದ ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಮಾತನಾಡಿ, ಧರ್ಮಸ್ಥಳ ಸಂಘ ಕೇವಲ ಮಹಿಳೆಯರನ್ನು ಸಂಘಟಿಸಿ ಆರ್ಥಿಕ ಹೊರೆ ಇಳಿಸಿಕೊಳ್ಳುವುದು, ಸಾಲ ಕಟ್ಟುವುದು, ಆರ್ಥಿಕ ಆಭಿವೃದ್ಧಿಗೆ ಮಾತ್ರವಲ್ಲ. ಸಾಂಸ್ಕೃತಿಕವಾಗಿಯೂ ತಾಯಿಂದಿರನ್ನು ಕಟ್ಟಿ ಬೆಳೆಸುವುದು ನಮ್ಮ ಧ್ಯೇಯವಾಗಿದೆ. ಧರ್ಮಸ್ಥಳ ಸಂಘಗಳ ಕಾರ್ಯಕ್ರಮಗಳು ಅತ್ಯಂತ ಅಚ್ಚುಕಟ್ಟು ಎಂಬ ಪ್ರತೀತಿ ಇದೆ. ಇದಕ್ಕೆ ಕಾರಣ ನಮ್ಮ ಸಂಘಟನೆಯ ತಾಯಿಂದಿರು ಶ್ರದ್ಧೆ ಹಾಗೂ ಶಿಸ್ತು ಉಳ್ಳವರಾಗಿ ಸಮಾಜದಲ್ಲಿ ಹೆಸರಾಗಿದ್ದಾರೆ. ಇಂತಹ ಮಹಿಳೆಯರಿಗಾಗಿ ಆಟೋಟಗಳ ಸ್ಫರ್ಧೆಗಳನ್ನು ಆಯೋಜಿಸುವ ಮೂಲ ಒಂದು ದಿನ ಎಲ್ಲರೂ ಕೂಡಿ ಆಡಿ ಆನಂದವಾಗಿರಲು ಅವಕಾಶವಾಗಿದೆ ಎಂದರು.

ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತವೀರಯ್ಯ ನೆಲೋಗಲ್ಲ, ವಲಯ ಮೇಲ್ವಿಚಾರಕ ರಾಕೇಶ, ಹಾನಗಲ್ಲ ವಲಯ ಮೇಲ್ವಿಚಾರಕಿ ನೇತ್ರಾವತಿ ಮಂಡಿಗನಾಳ, ಅಕ್ಕಿಆಲೂರು ವಲಯ ಮೇಲ್ವಿಚಾರಕ ಶ್ರೀನಿವಾಸ, ಆಡೂರು ವಲಯ ಮೇಲ್ವಿಚಾರಕಿ ಗೌರಮ್ಮ ಮೊದಲಾದವರಿದ್ದರು.

ಕ್ರೀಡಾಕೂಟದಲ್ಲಿ ಸಂಘದ ೪೦೦ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು.