ಸಾರಾಂಶ
ಗ್ರಾಹಕರ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲ್ಲಾಪುರತ್ರೇತಾಯುಗ ಮಂತ್ರ-ಯಂತ್ರಗಳ ಕಾಲವಾಗಿತ್ತು. ನಂತರ ದ್ವಾಪರಯುಗದಲ್ಲಿ ಮಂತ್ರ-ಯಂತ್ರ-ತಂತ್ರಗಳ ಕಾಲವಾಗಿತ್ತು. ಇಂದಿನ ಕಲಿಯುಗವು ಎಲ್ಲವನ್ನೂ ಒಳಗೊಂಡಿದ್ದರೂ ಜನರಲ್ಲಿ ಸ್ವಾರ್ಥ ಮನೋಭಾವ ಅಧಿಕವಾಗಿ, ಧರ್ಮ ನಶಿಸುತ್ತಿದೆ ಎಂದು ಜ್ಯೋತಿರ್ವಿದ್ವಾನ್ ನಾಗೇಂದ್ರ ಭಟ್ಟ ಹಿತ್ಲಳ್ಳಿ ಹೇಳಿದರು.ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘವು ಹಮ್ಮಿಕೊಂಡಿದ್ದ ಗ್ರಾಹಕರ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಇಡುವವರು, ತೆಗೆದುಕೊಳ್ಳುವವರು, ಕೊಡುವವರು ಎಂಬ ಮೂರು ರೀತಿಯ ಜನರಿರುತ್ತಾರೆ ಎಂದು ದೇಶದ ಶ್ರೇಷ್ಠ ಆರ್ಥಿಕ ಶಾಸ್ತ್ರಜ್ಞ ಚಾಣಕ್ಯ ಹೇಳಿದ್ದಾನೆ. ಪ್ರಸ್ತುತ ಶ್ರೀಮಾತಾ ಅಧ್ಯಕ್ಷರು ಕಷ್ಟಪಟ್ಟು ಸಾಧನೆ ಮಾಡಿ, ಕಷ್ಟದಲ್ಲಿರುವವರಿಗೆ ನೆರವು ನೀಡುವ ಉದಾತ್ತ ಮನೋಭಾವ ಹೊಂದಿದ್ದಾರೆ. ಇಂತಹ ಸಭ್ಯ ವ್ಯಕ್ತಿಗಳಿಗೆ ಸಮಾಜ ಋಣಿಯಾಗಿರಬೇಕು. ಶ್ರೀ ದೇವರು ಅವರನ್ನು ಅನುಗ್ರಹಿಸಲಿ ಎಂದ ಅವರು, ಇಂದಿನ ದಿನಗಳಲ್ಲಿ ಸಂಘ ಶಕ್ತಿಯೇ ಪ್ರಧಾನ ಶಕ್ತಿಯಾಗಿದ್ದು, ಇದರ ಹೊರತಾದ ಜೀವನ ಸಾಧ್ಯವಾಗದು ಎಂದರು.ಅತಿಥಿಗಳಾಗಿದ್ದ ಯು.ಕೆ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಮಾಜದ ಎಲ್ಲೆಡೆಯೂ ವ್ಯಾಪಾರೀಕರಣವೇ ಹೆಚ್ಚುತ್ತಿದ್ದು, ಜನರಲ್ಲಿ ವೃತ್ತಿ-ಪ್ರವೃತ್ತಿಗಳು ಅನೈಜಗೊಂಡಿವೆ. ನಕಲಿ ಸಂವಹನ ಅಧಿಕಗೊಂಡು ಭಾವನೆಗಳು ಶುಷ್ಕವಾಗಿ ನೀರಸಗೊಳ್ಳತೊಡಗಿವೆ. ಇದು ಸಾಮಾಜಿಕ ದುರಂತಕ್ಕೆ ಕಾರಣವಾಗುತ್ತಿದೆ ಎಂದರು.ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಶಶಾಂಕ ಹೆಗಡೆ, ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಉಮ್ಮಚಗಿ ವ್ಯ.ಸೇ.ಸ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಮಾತನಾಡಿದರು. ಶ್ರೀಮಾತಾ ಆಡಳಿತ ಮಂಡಳಿ ಹಾಗೂ ಸದಸ್ಯರು ಜಿ.ಎನ್. ಹೆಗಡೆ ಹಾಗೂ ಎನ್.ಕೆ. ಭಟ್ಟ ಅವರನ್ನು ಸನ್ಮಾನಿಸಿದರು. ಸಂಘದ ೮ ಜನ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತಲ್ಲದೇ, ೩೩ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಮಾತನಾಡಿ, ಸಂಘದ ಪ್ರಗತಿಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ಯೋಚನೆ-ಯೋಜನೆಗಳಿಗೆ ಸಹಕಾರ ಅಪೇಕ್ಷಣೀಯ ಎಂದರು.ನಿರ್ದೇಶಕರಾದ ರವೀಂದ್ರ ಹೆಗಡೆ, ವಿ.ಎಂ. ಭಟ್ಟ, ಆರ್.ಎಲ್. ಭಟ್ಟ, ಶಿವರಾಮ ಶಾಸ್ತ್ರಿ, ಬಾಲಚಂದ್ರ ಭಟ್ಟ, ಕೆ.ವಿ. ಭಟ್ಟ, ಕೆ.ಎನ್. ಹೆಗಡೆ, ಮಂಜುನಾಥ ಪೂಜಾರಿ, ವಸುಮತಿ ಹೆಗಡೆ, ಶೋಭಾ ವಡ್ಡರ್ ಉಪಸ್ಥಿತರಿದ್ದರು.ಪಾವನಾ ಹೆಗಡೆ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಟ್ರಸ್ಟಿ ಶಕುಂತಲಾ ಹೆಗಡೆ ಸ್ವಾಗತಿಸಿದರು. ಉಪಾಧ್ಯಕ್ಷ ಎಸ್.ಎಸ್. ಭಟ್ಟ ಈರಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಸಲಹೆಗಾರ ಜಿ.ಕೆ. ಹೆಗಡೆ ಕನೇನಹಳ್ಳಿ ಸನ್ಮಾನಪತ್ರ ವಾಚಿಸಿದರು. ಎಂ.ಕೆ. ಭಟ್ಟ ಯಡಳ್ಳಿ ನಿರ್ವಹಿಸಿದರು. ನಿರ್ದೇಶಕ ಕೆ.ಎಸ್.ಭಟ್ಟ ಆನಗೋಡ ವಂದಿಸಿದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಜರುಗಿತು. ಮುಖ್ಯ ಕಾರ್ಯನಿರ್ವಾಹಕ ಗೋಪಾಲಕೃಷ್ಣ ಹೆಗಡೆ ವರದಿ ಮಂಡಿಸಿದರು. ಸಭೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಕುರಿತ ಸರ್ಕಾರದ ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು. ಈ ಯೋಜನೆ ಕೈಬಿಡಬೇಕೆಂದು ಆಗ್ರಹಿಸಲಾಯಿತು.
;Resize=(128,128))
;Resize=(128,128))
;Resize=(128,128))