ಕನಕಪುರ: ಪ್ರಕೃತಿ ಎಲ್ಲವನ್ನು ಕೊಟ್ಟಿದೆ, ಮನುಷ್ಯನ ದುರಾಸೆಯಿಂದ ಭ್ರಷ್ಟಾಚಾರ ಹುಟ್ಟಿಕೊಂಡಿದ್ದು, ಅದನ್ನು ಬೇರು ಸಮೇತ ಕಿತ್ತು ಭ್ರಷ್ಟ ಮುಕ್ತ ಸಮಾಜ ನಿರ್ಮಿಸಬೇಕು ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು
ಕನಕಪುರ: ಪ್ರಕೃತಿ ಎಲ್ಲವನ್ನು ಕೊಟ್ಟಿದೆ, ಮನುಷ್ಯನ ದುರಾಸೆಯಿಂದ ಭ್ರಷ್ಟಾಚಾರ ಹುಟ್ಟಿಕೊಂಡಿದ್ದು, ಅದನ್ನು ಬೇರು ಸಮೇತ ಕಿತ್ತು ಭ್ರಷ್ಟ ಮುಕ್ತ ಸಮಾಜ ನಿರ್ಮಿಸಬೇಕು ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇಂದು ಇದ್ದು, ನಾಳೆ ಹೋಗುವ ಈ ಬದುಕಿನ ಮರ್ಮ ಅರಿಯದೆ ದುರಾಸೆ, ಸ್ವಾರ್ಥ, ಮೋಹದ ಕಾರಣದಿಂದಲೇ ಭ್ರಷ್ಟಾಚಾರ ಹುಟ್ಟಿಕೊಳ್ಳುತ್ತದೆ. ಇಂದು ಯಾವ ಕ್ಷೇತ್ರವು ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಕಲಬೆರಿಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಹಿಂದಿನ ಕಾಲದಲ್ಲಿ ಯಾವ ಕಾನೂನು ಕಟ್ಟಲೆಗಳು ಇರಲಿಲ್ಲ. ಯಾವುದೇ ತಪ್ಪು-ಒಪ್ಪುಗಳು ನಡೆದರು ಅರಳಿಕಟ್ಟೆ ಪಂಚಾಯತಿಯಲ್ಲಿ ಕುಳಿತು ಎಲ್ಲವನ್ನು ಬಗೆಹರಿಸುತ್ತಿದ್ದರು. ಈಗ ಎಲ್ಲವೂ ಬದಲಾಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟವವರು ಯಾರು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದೆ, ಭ್ರಷ್ಟಾಚಾರ ನಿರ್ಮೂಲನೆಗಾಗಿ 2012ರಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಚರನೆ ಸಮಿತಿ ಜನ್ಮ ತಾಳಿದೆ. ಭ್ರಷ್ಟಾಚಾರ ರೋಗಕ್ಕೂ ಮದ್ದು ಕೊಡಬೇಕಿದೆ. ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಷ್ಟ್ರ ವ್ಯಾಪಿ ಶಾಖೆಗಳನ್ನು ಪ್ರಾರಂಭಿಸಿ ಭ್ರಷ್ಟಾಚಾರ ವಿರುದ್ಧ ಸಂಘಟಿತ ಹೋರಾಟಗಳಾಗಬೇಕು ಎಂದು ತಿಳಿಸಿದರು.ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಲಿಂಗೇಗೌಡ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಬೇಕಿರುವುದು ನೈತಿಕತೆ. ಭ್ರಷ್ಟಾಚಾರ ನಿರ್ಮೂಲನೆ ಕೇವಲ ಸರ್ಕಾರಕ್ಕೆ ಸೇರಿದ್ದಲ್ಲ, ಈ ನಾಡಿನ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಮುಂದಿನ ಪೀಳಿಗೆಗೆ ಭ್ರಷ್ಟ ಮುಕ್ತ ಸಮಾಜ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದರೆ ಇಂದು ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ಸಮಿತಿ ರಾಜ್ಯಾಧ್ಯಕ್ಷ ಗುರುಸ್ವಾಮಿ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ನಾವು ಹೋರಾಡಬೇಕೆಂದರೆ ಮೊದಲು ನಾವು ಶುದ್ಧಹಸ್ತರಾಗಬೇಕು. ನಮ್ಮ ಹೋರಾಟಕ್ಕೆ ಕೈಜೋಡಿಸುವವರು ರಾಜಕೀಯದಿಂದ ದೂರ ಇರಬೇಕು, ಯಾವುದೇ ಕಾರಣಕ್ಕೂ ಸಮಿತಿ ಹೆಸರನ್ನು ದುರ್ಬಳಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.ಬೆಂಗಳೂರು ದಕ್ಷಿಣ ಜಿಲ್ಲಾ ರಾಮನಗರ ಅಧ್ಯಕ್ಷ ನಾರಾಯಣ್, ಕನಕಪುರ ಸಮಿತಿ ಸದಸ್ಯ ವಕೀಲ ಜೈರಾಮೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದಯಾನಂದ, ರಾಜ್ಯ ಕಾರ್ಯಧ್ಯಕ್ಷ ಡಾ.ಎಚ್.ಬಿ.ಎಂ ಹಿರೇಮಠ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಹುಚ್ಚಪ್ಪ, ರಾಜ್ಯ ಉಪಾಧ್ಯಕ್ಷ ಟಿ.ಡಿ.ಹೊಂಬಾಳೆಗೌಡ, ರಾಜ್ಯ ಕಾರ್ಯದರ್ಶಿ ಶಿವಮಾದು, ಪ್ರಧಾನ ಕಾರ್ಯದರ್ಶಿ ರಾಜು.ಸಿ, ರಾಜ್ಯ ಆಡಳಿತ ಮಂಡಳಿ ಸದಸ್ಯ ಗಬ್ಬಾಡಿ ಕಾಳೇಗೌಡ, ಚಿಕ್ಕೆಂಪೇಗೌಡ, ತಾಲೂಕು ಘಟಕದ ಪದಾಧಿಕಾರಿಗಳಾದ ಗಂಗಾಧರಯ್ಯ ಸಿ, ರಮೇಶ್.ಎಂ.ವಿ, ಚಿಕ್ಕರಂಗಯ್ಯ, ನಾರಾಯಣ.ಟಿ, ರಾಮಚಂದ್ರೇಗೌಡ, ಮುನಿಶಿವಣ್ಣೇಗೌಡ, ಓಂಕಾರೇಶ್ವರ.ಟಿ.ಎಚ್,ರಾಮಯ್ಯ.ಟಿ.ಎಂ, ಮಹೇಶಯ್ಯ ಕೆ.ಆರ್, ಕೂಗಿ ಗಿರಿಯಪ್ಪ, ಬಿ.ಎಂ. ಚೆಲುವೇಗೌಡ, ರಾಜಪ್ಪ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕೆ ಕೆ ಪಿ ಸುದ್ದಿ 01: ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಂಘಟನೆ ಕಾರ್ಯಕ್ರಮ.