ಸಾರಾಂಶ
ಕೊಪ್ಪಳ:
ಪ್ರತಿಯೊಬ್ಬರು ಸೇವಾ ಮನೋಭಾವ ಹೊಂದಬೇಕು. ನಿಸ್ವಾರ್ಥ ಸೇವೆ ನಮ್ಮನ್ನು ಕಷ್ಟ ಕಾಲದಲ್ಲಿ ಕಾಪಾಡುತ್ತದೆ ಎಂದು ಗವಿಮಠದ ಕಿರಿಯ ಸ್ವಾಮೀಜಿ ವೀರೇಶ ದೇವರು ಹೇಳಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮನುಷ್ಯ ಪ್ರಕೃತಿ ನೋಡಿ ಕಲಿಯಬೇಕು. ಗಿಡ-ಮರಗಳು ಮಣ್ಣು ತಿಂದು ನಮಗೆ ಸಿಹಿಯಾದ ಹಣ್ಣು ಕೊಡುತ್ತವೆ. ಹುಲ್ಲು ಮೇಯ್ದ ಆಕಳು ನಮಗೆ ಅಮೃತ ಸಮಾನವಾದ ಹಾಲು ಕೊಡುತ್ತದೆ. ಅದರಂತೆ ಮನುಷ್ಯ ಕೂಡ ಪರೋಪಕಾರಿ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಅಂಗಡಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರಯ್ಯ ಸೊಪ್ಪಿಮಠ ಅವರಿಗೆ ತ್ರಿವಿಕ್ರಮ ಜೋಶಿ ಪ್ರಮಾಣ ವಚನ ಬೋಧಿಸಿದರು.ಬಳಿಕ ಮಾತನಾಡಿದ ಅವರು, ರೋಟರಿ ಕ್ಲಬ್ ಇಡೀ ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆಗಾಗಿ ಶ್ರಮಿಸಿದೆ. ಈಗ ಭಾರತದಲ್ಲಿ ಕ್ಯಾನ್ಸರ್ ಹೆಚ್ಚುತ್ತಿದ್ದು ಅದರ ನಿರ್ಮೂಲನೆಗೆ ಯೋಜನೆ ಕೈಗೆತ್ತಿಕೊಳ್ಳುವ ಯೋಚನೆ ಇದೆ. ದೇಶದಲ್ಲಿ ಈ ವರ್ಷದಿಂದ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ 20 ಲಕ್ಷ ಉಚಿತ ಕಂಪ್ಯೂಟರ್ ನೀಡಲು ರೋಟರಿ ಕ್ಲಬ್ ತೀರ್ಮಾನಿಸಿದೆ ಎಂದು ಕ್ಲಬ್‌ನ ಧ್ಯೇಯೋದ್ದೇಶ ತಿಳಿಸಿದರು.
ನೂತನ ಅಧ್ಯಕ್ಷ ಮಂಜುನಾಥ ಅಂಗಡಿ ಮಾತನಾಡಿ, ಎಲ್ಲ ಸದಸ್ಯರ ಸಲಹೆ, ಸಹಕಾರ ನೀಡಿದರೆ ಶಕ್ತಿ ಮೀರಿ ಕೆಲಸ ಮಾಡುವೆ. ಪ್ರತಿಯೊಂದು ಕಾರ್ಯ ಯಶಸ್ವಿಯಾಗಲು ಹಿರಿಯರ ಮಾರ್ಗದರ್ಶನ ಅವಶ್ಯವಾಗಿದೆ. ಅದನ್ನು ತಮ್ಮಿಂದ ನಿರೀಕ್ಷಿಸುತ್ತೇನೆ ಎಂದರು.ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಮಾತನಾಡಿ, ಮನುಷ್ಯನಿಗೆ ನೆಮ್ಮದಿ ಸಿಗಬೇಕಾದರೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಕೊಟ್ಟಷ್ಟು ನಮ್ಮ ಸಂಪತ್ತು ಕಡಿಮೆಯಾಗುವುದಿಲ್ಲ. ಅದು ಹೆಚ್ಚುತ್ತದೆ. ಹಾಗಾಗಿ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಈ ವೇಳೆ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಬೊಮ್ಮಣ್ಣ ಅಕ್ಕಸಾಲಿ, ನೂತನ ಅಧ್ಯಕ್ಷ ಮಂಜುನಾಥ ಅಂಗಡಿ, ಕಾರ್ಯದರ್ಶಿ ಚಂದ್ರಶೇಖರಯ್ಯ ಸೊಪ್ಪಿಮಠ, ಕೆ.ಜಿ. ಕುಲಕರ್ಣಿ, ರಾಜೇಶ್ ಕೋರಿಶೆಟ್ಟರ್ ಸೇರಿದಂತೆ ಇತರರು ಇದ್ದರು.