28ರಂದು ‘ಸಮಗ್ರ-ಸಮತೆಯೆಡೆಗೆ ಸಾಹಿತ್ಯ’ ಕುರಿತು ವಿಚಾರ ಸಂಕಿರಣ

| Published : Apr 25 2025, 11:50 PM IST

ಸಾರಾಂಶ

ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬೆಳಗ್ಗೆ 10 ಗಂಟೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ವಿವಿ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ವಹಿಸಲಿದ್ದಾರೆ. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಕೊಡಗು ವಿವಿ ಕುಲ ಸಚಿವ ಡಾ.ಸುರೇಶ್ ಎಂ. ಉಪಸ್ಥಿತರಿರುವರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಚಿಕ್ಕ ಅಳುವಾರದ ಕೊಡಗು ವಿವಿಯ ಜ್ಞಾನ ಕಾವೇರಿ ಆವರಣದಲ್ಲಿ ಏ.28ರಂದು ‘ಸಮಗ್ರ-ಸಮತೆಯೆಡೆಗೆ ಸಾಹಿತ್ಯ’ ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ಅಹಿಂದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದಲಿತ ಸಾಹಿತ್ಯ ಪರಿಷತ್ತು, ಕೊಡಗು ವಿಶ್ವವಿದ್ಯಾನಿಲಯ, ಮಾನವ ಬಂಧುತ್ವ ವೇದಿಕೆ, ಸಹಮತ ವೇದಿಕೆ ಮತ್ತು ಅಹಿಂದ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್‌ 134ನೇ ಜನ್ಮದಿನದ ಅಂಗವಾಗಿ ವಿಚಾರ ಸಂಕಿರಣ ನಡೆಸುತ್ತಿರುವುದಾಗಿ ತಿಳಿಸಿದರು.

ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅಂದು ಬೆಳಗ್ಗೆ 10 ಗಂಟೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ವಿವಿ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ವಹಿಸಲಿದ್ದಾರೆ. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಕೊಡಗು ವಿವಿ ಕುಲ ಸಚಿವ ಡಾ.ಸುರೇಶ್ ಎಂ. ಉಪಸ್ಥಿತಿ ಇರಲಿದೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಬೆಳಗ್ಗೆ 11 ಗಂಟೆಗೆ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ‘ಸಮಗ್ರ-ಸಮತೆಯೆಡೆಗೆ ಸಾಹಿತ್ಯ’ ವಿಷಯದ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದ ರಾಜ್ ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉಪಸ್ಥಿತರಿರಲಿದ್ದಾರೆ ಎಂದರು.

ಮಧ್ಯಾಹ್ನ 12.30 ಗಂಟೆಗೆ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಆ‌ರ್.ಗಂಗಾಧರ ಅಧ್ಯಕ್ಷತೆಯಲ್ಲಿ ‘ಕೊಡಗಿನಲ್ಲಿ ಅಹಿಂದ ಒಕ್ಕೂಟದ ನೆಲೆಗಟ್ಟುಗಳು’ ವಿಷಯದ ಕುರಿತು ಎರಡನೇ ವಿಚಾರ ಸಂಕಿರಣ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿರುವ ಕೊಡಗು ಅಹಿಂದ ಒಕ್ಕೂಟದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ವಿಷಯ ಮಂಡಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸಮಾರೋಪ ಸಮಾರಂಭ ಮಧ್ಯಾಹ್ನ 1.30 ಗಂಟೆಗೆ ಕೊಡಗು ವಿವಿ ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್ ಪಾಲ್ಗೊಳ್ಳಲಿದ್ದು, ಸಮಾರೋಪ ಭಾಷಣವನ್ನು ಸಾಮಾಜಿಕ ಚಿಂತಕ ವಿ.ಪಿ.ಶಶಿಧರ್ ಮಾಡಲಿದ್ದಾರೆ. ಚಾಮರಾಜನಗರ ವಿವಿ ಕುಲಪತಿಗಳಾದ ಡಾ.ಎಂ.ಆರ್.ಗಂಗಾಧರ, ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ, ದಲಿತ ಮುಖಂಡರಾದ ಜಯಪ್ಪ ಹಾನಗಲ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಅಹಿಂದ ಜಿಲ್ಲಾಧ್ಯಕ್ಷ ಟಿ.ಎಂ.ಮುದ್ದಯ್ಯ, ಕಾರ್ಯಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಮತ್ತು ವಿರಾಜಪೇಟೆ ತಾಲೂಕು ಸಂಘಟಕ ಅಬ್ದುಲ್ ರೆಹಮಾನ್ ಸುದ್ದಿಗೋಷ್ಠಿಯಲ್ಲಿದ್ದರು.